

ಮೈಸೂರು: ಇತ್ತೀಚೆಗೆ ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಬದಲಾವಣೆ ಗಳನ್ನು ಎದುರಿ ಸಲು ಸಮುದಾಯ ಸಜ್ಜಾಗಬೇಕಾಗಿದೆ. ಹಾಗಾಗಿ ನಾಯಕ ಸಮುದಾಯ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿ ಅವಕಾಶ ಪಡೆಯುವ ಮೂಲಕ ಮೀಸಲಾತಿಯಿಂದ ಹೊರ ಬರುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ರಾಜ್ಯ ನಾಯಕರ ಯುವ ಸೇನೆ, ರವಿ ಡಿ. ಚನ್ನಣ್ಣನವರ್ ಅಭಿಮಾನಿ ಬಳಗ, ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಭಾನುವಾರ ವಿಜಯನಗರ 2 ನೇ ಹಂತದಲ್ಲಿರುವ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ನಾವು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮೀಸಲಾತಿಯನ್ನೇ ನಂಬಿ ಕೂರದೆ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿ ಅವಕಾಶ ಪಡೆಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಮಾನಸಿಕತೆಯನ್ನು ನಾವು ಬೆಳೆಸಿಕೊಳ್ಳದೆ ಇದ್ದರೆ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸುವುದು ಕಷ್ಟವಾಗುತ್ತದೆ.
ಸಂವಿಧಾನವಿಲ್ಲದಿದ್ದರೆ ನಮ್ಮಂತಹ ಸಮುದಾಯದವರು ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರಂತೆ ನಾವು ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನ ನಮ್ಮಂತಹ ಹಿಂದುಳಿದ ವರ್ಗಗಳಿಗೆ ಎಲ್ಲಾ ರೀತಿಯ ಸ್ಥಾನ ಮಾನಗಳನ್ನು ನೀಡಿದೆ. ಹೀಗಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಂವಿಧಾನದಲ್ಲಿ ಹೇಳಿರುವಂತೆ ಸಮ-ಸಮಾಜದ ನಿರ್ಮಾಣ ಆಗಬೇಕಿದೆ ಎಂದರು.