ನಾಡು, ನುಡಿ ರಕ್ಷಣೆಗೆ ಮುಂದಾಗಿ

7 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ನಾಡು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ನಾಡು-ನುಡಿ ರಕ್ಷಣೆಗೆ ನಾವೆಲ್ಲ ಸಂಕಲ್ಪ ಬಲದಿಂದ ಶಕ್ತಿ ಶಾಲಿಗಳಾಗಿ ದುಡಿಯಬೇಕು ಎಂದು ಕವಿವಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕಿ ಡಾ. ಅನಸೂಯಾ ಕಾಂಬಳೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ-50 ನಿಮಿತ್ತ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ 7ನೇ ದಿನದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಭಾರತದ ಸ್ವಾತಂತ್ರೃ ಹಾಗೂ ಏಕೀಕರಣ ಹೋರಾಟಗಳು ಕನ್ನಡಿಗರ ಜೀವನದಲ್ಲಿ ಅತ್ಯಂತ ಮಹತ್ವ ಪೂರ್ಣ ಘಟನೆಗಳು. ಕರ್ನಾಟಕ ಏಕೀಕರಣವಾಗಬೇಕೆಂಬ ಬೇಡಿಕೆ ಸ್ವಾತಂತ್ರೃದ ಬೇಡಿಕೆಯಷ್ಟೇ ಹಳೆಯದು. 1956ರ ಮುಂಚೆ ಭಾರತದ ಭೂಪಟದಲ್ಲಿ ಕರ್ನಾಟಕ ಹೆಸರಿನ ರಾಜ್ಯವೇ ಇರಲಿಲ್ಲ. ಅದರಗುಂಚಿ ಶಂಕರಗೌಡ್ರು 23 ದಿನ ಉಪವಾಸ ಮಾಡಿದ್ದು ಏಕೀಕರಣಕ್ಕೆ ದಾರಿದೀಪವಾಯಿತು. ಏಕೀಕರಣಕ್ಕೆ ಹೋರಾಡಿದ ಅನೇಕ ಹೋರಾಟಗಾರರ ತ್ಯಾಗ, ಸೇವೆ, ನಿಸ್ವಾರ್ಥ ಭಾವನೆ ಪ್ರತಿಯೊಬ್ಬ ಕನ್ನಡಿಗರು ಸ್ಮರಿಸಬೇಕು ಎಂದರು.
ಸಿ.ಎಸ್. ಪಾಟೀಲ ಮಾತನಾಡಿದರು. ಕಿಟೆಲ್ ಕಾಲೇಜಿನ ಪ್ರಾಚಾರ್ಯೆ ಡಾ. ರೇಖಾ ಜೋಗುಳ ಅಧ್ಯಕ್ಷತೆ ವಹಿಸಿದ್ದರು. ಹರ್ಲಾಪುರ ಗ್ರಾಮದ ಸಾಂಸ್ಕೃತಿಕ ಕೇಂದ್ರದ ಕಲಾವಿದರಾದ ಎಸ್.ಎಸ್. ಹಿರೇಮಠ, ಈಶ್ವರ ಅರಳಿ, ಮಲ್ಲಪ್ಪ ಮುಳಗುಂದ, ಶರೀಫ ದೊಡಮನಿ, ನಾಗರಾಜ ಗೌಡಣ್ಣವರ ಕನ್ನಡ ನಾಡು-ನುಡಿ ಗೀತೆ ಪ್ರಸ್ತುತಪಡಿಸಿದರು.
ಸತೀಶ ತುರಮರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಟೆಲ್ ಕಾಲೇಜಿನ ಡಾ. ಎಸ್.ಬಿ. ನ್ಯಾಮತಿ, ಪ್ರೊ. ಅವಿನಾಶ, ಪ್ರೊ. ಶ್ರೀನಿವಾಸ ಪೂಜಾರ, ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net