

ಪಿರಿಯಾಪಟ್ಟಣ : ಪಟ್ಟಣದ ವೈದ್ಯೇಶ್ವರ ಬಡಾವಣೆಯ ನಿವಾಸಿ ಗೀತಾ ಮತ್ತು ಕೃಷ್ಣ ದಂಪತಿ ನವರಾತ್ರಿಯ ವಿಶೇಷತೆಗಳಲ್ಲಿ ಒಂದಾದ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಪ್ರದಾಯವನ್ನು ಕಳೆದ 30 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ವಿಶೇಷ ಅಲಂಕೃತ ಬೊಂಬೆಗಳನ್ನು ಕೂರಿಸಿ ಸಾರ್ವಜನಿಕರಿಗೆ ನೋಡುವ ಅವಕಾಶ ಕಲ್ಪಿಸುವ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುತ್ತಾ ಬಂದಿದ್ದಾರೆ.
ಭಾರತೀಯ ಸಂಸ್ಕೃತಿಯ ವೈವಿಧ್ಯತೆಗಳನ್ನು ತಮ್ಮ ಮನೆಯಲ್ಲಿನ ಗೊಂಬೆ ಪ್ರದರ್ಶನದಲ್ಲಿ ತಿಳಿಸಿರುವ ಇವರು ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಹಳ್ಳಿ ಸೊಗಡು, ಜಂಬೂ ಸವಾರಿಯನ್ನು ನೆನಪಿಸುವ ದಸರಾ ಮೆರವಣಿಗೆ, ವಿವಾಹದ ಸನ್ನಿವೇಶವನ್ನು ತೋರುವ ವಿವಾಹ ಭೋಜನ, ಸಪ್ತ ಋಷಿಗಳ ಪರಿಚಯ ಸೇರಿದಂತೆ ಹಲವು ವೈವಿಧ್ಯತೆಗಳನ್ನು ಪ್ರದರ್ಶಿಸಿದ್ದಾರೆ. ಭಾರತೀಯ ಸಂಸ್ಕೃತಿಯ ನೃತ್ಯ ರೂಪಕಗಳಾದ ರಾಜಸ್ಥಾನಿ, ಕೂಚುಪುಡಿ, ಮೋಹಿನಿ, ಭರತನಾಟ್ಯ, ಮಣಿಪುರಿ, ಒಡಿಸ್ಸಿ, ಕಥಕ್, ಲಾವಣಿ ನೃತ್ಯ ರೂಪಕಗಳನ್ನು ಪರಿಚಯಿಸಲಾಗಿದೆ.
ರಾಮಾಯಣ, ಮಹಾಭಾರತ, ಸಪ್ತ ಋಷಿಗಳಾದ ಮರೀಚಿ, ಅತ್ರಿ, ಅಂಗಿರಸ, ಪುಲಹ, ಪುಲಸ್ತ್ಯ, ಕ್ರತು, ಅಗಸ್ತ್ಯ, ವಸಿಷ್ಠ ಅವರಿಗೆ ವಿಶೇಷ ವೇದಿಕೆ ನೀಡಲಾಗಿದೆ. ಗೀತೋಪದೇಶ, ಗಜೇಂದ್ರ ಮೋಕ್ಷ, ವಿವಾಹ ಭೋಜನ, ಹಳ್ಳಿ ಸೊಗಡು, ಪೂತನೀಯ ಸಂಹಾರ, ಕೋದಂಡರಾಮ, ಭೀಮನ ಗರ್ವಭಂಗ, ಭಕ್ತ ಮಾಕರ್ಂಡೇಯ, ಅಷ್ಟಲಕ್ಷ್ಮೀ, ದಶಾವತಾರ, ಕೃಷ್ಣ ಲೀಲೆ, ಬ್ರಹ್ಮೋತ್ಸವ, ಪಟ್ಟಾಭಿರಾಮ, ಕಾವಡಿ ಸೇವೆ, ನವ ದುರ್ಗೆಯರು, ಸಮುದ್ರಮಥನ, ಶ್ರೀ ಕೃಷ್ಣ ತುಲಾಭಾರ, ಶ್ರೀನಿವಾಸ ಕಲ್ಯಾಣ, ಘಟೋದ್ಗಜ ಭೋಜನ, ರಾವಣ ದರ್ಬಾರ್, ಗೋವರ್ಧನ ಗಿರಿ , ಕೈಲಾಸ ಪರ್ವತ, ಚಾರ್ ಧಾಮ್, ಸಂಗೀತ ತ್ರಿಮೂರ್ತಿ, ದಸರಾ ಮೆರವಣಿಗೆ, ದ್ರೌಪದಿ ವಸ್ತ್ರಾಪಹರಣ ಸೇರಿದಂತೆ ಹಲವು ಐತಿಹಾಸಿಕ ಸನ್ನಿವೇಶಗಳನ್ನು ಬಿಂಬಿಸುವ ಬೊಂಬೆ ಪ್ರದರ್ಶನಗಳು ಇಲ್ಲಿ ಕಾಣಸಿಗುತ್ತವೆ. ದಸರಾ ಬೊಂಬೆ ಪ್ರದರ್ಶನದ ಮುಖ್ಯ ಆಕರ್ಷಣೆಯಾದ ಪಟ್ಟದ ಬೊಂಬೆಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ.
ಈ ದಸರಾ ಬೊಂಬೆ ಪ್ರದರ್ಶನಕ್ಕೆ ಅಗತ್ಯವಿರುವ ಗೊಂಬೆಗಳನ್ನು ಸಂಗ್ರಹಿಸಿರುವ ದಂಪತಿಗಳು ಕೆಲವೊಮ್ಮೆ ತಮಿಳುನಾಡಿನ ವರೆಗೂ ಹೋಗಿ ಗೊಂಬೆಗಳನ್ನು ಖರೀದಿಸಿ ತಂದಿರುವುದಾಗಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ನವರಾತ್ರಿಯ ದಿನಗಳಲ್ಲಿ ಈ ಬೊಂಬೆ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದ್ದು, ನವರಾತ್ರಿಯ ಆರಂಭ ದಿನದಿಂದ ವಿಜಯದಶಮಿ ದಿನದವರೆಗೂ ಸಾರ್ವಜನಿಕರು ಬೆಳಗ್ಗೆ 10 ಗಂಟೆಯಿಂದ ಸಂಜೆ 8 ರವರೆಗೂ ಹೋಗಿ ನೋಡಬಹುದಾಗಿದೆ.