ಬನ್ನಿ ಕಡಿದು ನವರಾತ್ರಿ ಉತ್ಸವಕ್ಕೆ ತೆರೆ

ಚನ್ನರಾಯಪಟ್ಟಣದ ಕಾಡುಬಸವೇಶ್ವರ  ದೇವಸ್ಥಾನದ ಆವರಣದಲ್ಲಿ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಬನ್ನಿ ಕಡಿದರು. ಅಭಿನವ ಕಾಡು ಸಿದ್ದೇಶ್ವರ ಸ್ವಾಮೀಜಿ, ಸತೀಶ್ ಚಂದ್ರಶೇಖರ್, ಶಂಭುನಾಥ್, ಪ್ರಭುಸ್ವಾಮಿ ಇದ್ದರು.
ಚನ್ನರಾಯಪಟ್ಟಣದ ಕಾಡುಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಬನ್ನಿ ಕಡಿದರು. ಅಭಿನವ ಕಾಡು ಸಿದ್ದೇಶ್ವರ ಸ್ವಾಮೀಜಿ, ಸತೀಶ್ ಚಂದ್ರಶೇಖರ್, ಶಂಭುನಾಥ್, ಪ್ರಭುಸ್ವಾಮಿ ಇದ್ದರು.
Published on

ಚನ್ನರಾಯಪಟ್ಟಣ: ತಿಪಟೂರಿನ ನೊಣವಿನಕೆರೆಯ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಪಟ್ಟಣದ ಕಾಡು ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಬನ್ನಿ ಕಡಿಯುವ ಮೂಲಕ ವಿಜಯದಶಮಿ ಆಚರಿಸಿದರು.

ಪಟ್ಟಣದ ಮೇಗಲಾಕೇರಿಯ ಕಾಡುಬಸವೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಆಚರಿಸುವುದು ವಾಡಿಕೆಯಲ್ಲಿದ್ದು ವಿಜಯದಶಮಿ ದಿನದಂದು ಸ್ವಾಮೀಜಿ ಬನ್ನಿ ಕಡಿದು ನವರಾತ್ರಿ ಉತ್ಸವಕ್ಕೆ ತೆರೆ ಎಳೆದರು.

ದೇವಾಲಯದಲ್ಲಿ 9 ದಿನಗಳ ಕಾಲ ದೇವಿ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ 12.30ಕ್ಕೆ ಆಗಮಿಸಿದ ಶಿವಯೋಗಿಶ್ವರ ಸ್ವಾಮೀಜಿ ಹಾಗೂ ಅಭಿನವ ಕಾಡು ಸಿದ್ದೇಶ್ವರ ಸ್ವಾಮೀಜಿ ಅವರನ್ನು ಭಕ್ತರು ಪೂರ್ಣಕುಂಭ ಕಳಶದೊಂದಿಗೆ ಸ್ವಾಗತಿಸಿದರು. ನಂತರ ಶ್ರೀಗಳು ಕಾಡು ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಂತರ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕತ್ತಿಯಿಂದ ಬನ್ನಿ ಕಡಿದರು. ಈ ಸಂದರ್ಭ ನೂರಾರು ಭಕ್ತರು ಜೈಕಾರ ಮೊಳಗಿಸಿದರು. ಸ್ವಾಮೀಜಿ ನೆರೆದಿದ್ದ ಭಕ್ತರಿಗೆ ಬನ್ನಿ ಹಾಗೂ ಬಾಗನಿ ನೀಡಿ ಆಶೀರ್ವದಿಸಿದರು.

ಮಳೆ ಮತ್ತು ಬೆಳೆ ಸಂತೃಪ್ತಿಯಾಗಿ ಆಗುವ ಮೂಲಕ ನಾಡಿನ ರಕ್ಷಣೆಯಾಗಲಿ. ಎಲ್ಲೆಡೆ ಶಾಂತಿ ಮತ್ತು ನೆಮ್ಮದಿ ಲಭಿಸಿ ಸರ್ವರ ಏಳಿಗೆಗೆ ಈ ವಿಜಯದಶಮಿ ಕಾರಣವಾಗಲಿ. ಮುಂದಿನ ದಸರಾ ಮಹೋತ್ಸವ ವೇಳೆಗೆ ಕಾಡು ಬಸವೇಶ್ವರ ದೇವಸ್ಥಾನ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನವೀಕರಣ ಮಾಡಲಾಗುವುದೆಂದು ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.

ಪರಿಸರ ಪ್ರೇಮಿ ಚ.ನಾ.ಅಶೋಕ್, ಸತ್ಯನಾರಾಯಣ, ಪುರಸಭಾ ಸದಸ್ಯ ಸಿ.ಎನ್.ಶಶಿಧರ್, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್ ಮರಗೂರು, ಮುಖಂಡರಾದ ನವಿಲೇ ಪರಮೇಶ್, ಸತೀಶ್ ಚಂದ್ರಶೇಖರ್, ಶಂಭುನಾಥ್, ಪ್ರಭುಸ್ವಾಮಿ, ದೇವಸ್ಥಾನದ ಅರ್ಚಕ ಶಿವಾನಂದ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net