ದೇಶ ಕಟ್ಟುವಲ್ಲಿ ಮೊದಲಿಗರಾಗಿ ಮೂಡಿ ಬನ್ನಿ

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಒಟ್ಟು 34 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಒಟ್ಟು 34 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಆಶಯ
  • ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
  • ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ
ಮಂಗಳೂರು: ವಿದ್ಯಾರ್ಥಿಗಳು ದೇಶ ಕಟ್ಟುವಲ್ಲಿ ಮೊದಲಿಗರಾಗಿ ಮೂಡಿ ಬರಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೇಳಿದರು.
ಶನಿವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿ ಪಿತಮಹ ದಿ. ಮೊಳಹಳ್ಳಿ ಶಿವರಾವ್ ಅವರ ಸ್ಮರಣಾರ್ಥವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ 2008ರಿಂದ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್ ವತಿಯಿಂದ ಇಂತಹ ದೊಡ್ಡ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುವುದಿಲ್ಲ. ನವೋದಯ ಸ್ವಸಹಾಯ ಸಂಘಗಳಲ್ಲಿ ಶೇ. 90ರಷ್ಟು ಮಂದಿ ಮಹಿಳಾ ಸದಸ್ಯರಿದ್ದು, ಅವರು ಜೀವನೋಪಾಯಕ್ಕಾಗಿ ಸಂಘದಿಂದ ಸಾಲ ಪಡೆದಿದ್ದಾರೆ. ಆ ಸಾಲವನ್ನು ಶೇ. 98.5ರಷ್ಟು ಮರುಪಾವತಿ ಮಾಡಿದ್ದಾರೆ. ಮಹಿಳೆಯರ ಪ್ರಾಮಾಣಿಕತೆಯನ್ನು ಇದು ಸಾರುತ್ತದೆ ಎಂದರು.

ದೇಶದ ಸಂಪತ್ತಾಗಿ ಬೆಳೆಯಿರಿ

ಮಾಜಿ ಸಚಿವ, ವಿಕಾಸ್ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಕೃಷ್ಣ ಜೆ.ಪಾಲೇಮಾರ್ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ನೀಡಿದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಉಳಿದ ಮಕ್ಕಳಿಗೆ ಪ್ರೇರಣೆಯಾಗಿದೆ. ಈ ಕಾರ್ಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು. ನೀವು ದೇಶದ ಸಂಪತ್ತಾಗಿ ಬೆಳೆಯಬೇಕು ಎಂದರು.

ಪ್ರತಿಭಾ ಪುರಸ್ಕಾರ

2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಒಟ್ಟು 34 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕ್‌ನ 116 ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆ ಹಾಗೂ ನವೋದಯ ಸ್ವಸಹಾಯ ಸಂಘಗಳ 161 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಎಸ್‌ ಸಿಡಿಸಿಸಿ ಬ್ಯಾಂಕ್ ಜನತಾ ಬಜಾರ್ ಶಾಖೆಯ ಮ್ಯಾನೇಜರ್ ದೀಪಕ್ ಅವರ ಪುತ್ರ ಕನಿಶ್ ಡಿ. ಕೋಟ್ಯಾನ್ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿ ಚಂದ್ರಶೇಖರ್ ಅವರ ಪುತ್ರಿ ಶ್ರೀಜಾ ಸಿ.ಕೋಟ್ಯಾನ್ ಅವರ ಬಹುಮುಖ ಪ್ರತಿಭೆ ಗುರುತಿಸಿ ಹಾಗೂ ಯೋಗದಲ್ಲಿ ಅಪೂರ್ವ ಸಾಧನೆಗೈದಿರುವ ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್. ಕೋಟ್ಯಾನ್, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ. ಮಹೇಶ್ ಹೆಗ್ಡೆ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್. ಮನ್ಮಥ, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಸಹಾಯಕ ನಿಬಂಧಕ ರಘು, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಸಿಇಒ ಪ್ರವೀಣ್ ನಾಯಕ್, ಎಸ್‌ಸಿಡಿಸಿಸಿ ಬ್ಯಾಂಕ್ ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೋಟ್ಟು ಸ್ವಾಗತಿಸಿದರು. ಸಿಬ್ಬಂದಿ ರಾಜೀವ್ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಮಹಾಪ್ರಬಂಧಕ ರಾಜೇಶ್ ಶೆಟ್ಟಿ ವಂದಿಸಿದರು.

ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದಾಗ ಹಿಂದಿನದನ್ನು ಮರೆತು ಬಿಡಬೇಡಿ. ಕನಿಷ್ಠ 2 ಮಕ್ಕಳಿಗಾದರೂ ವಿದ್ಯಾರ್ಥಿ ವೇತನ ನೀಡುವುದಾಗಿ ನಿರ್ಧರಿಸಿ. ಆಗ ನಮಗೂ ತೃಪ್ತಿಯಾಗುತ್ತದೆ.

— ಡಾ. ಎಂ.ಎನ್. ರಾಜೇಂದ್ರ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು


ಮೊಳಹಳ್ಳಿ ಶಿವರಾವ್ ಅವರನ್ನು ಮೀರಿಸುವಂತಹ ಕಾರ್ಯವನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾಡುತ್ತಿದ್ದಾರೆ. ಸಹಕಾರ ರಂಗವನ್ನು ಜಗದ್ಪ್ರಸಿದ್ಧಗೊಳಿಸಿದ್ದಾರೆ. 3 ಲಕ್ಷ ನವೋದಯ ಗುಂಪುಗಳ ಮೂಲಕ 15 ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಯೋಜನ ಸಿಗುವಂತೆ ಮಾಡಿದ್ದಾರೆ. ಉದ್ಯೋಗ ಕಲ್ಪಿಸಿ ಎಷ್ಟೋ ಮಂದಿಯ ಬಾಳಿಗೆ ಆಶಾಕಿರಣರಾಗಿದ್ದಾರೆ. ಅವರು ಸಹಕಾರಿ ರಂಗಕ್ಕೆ ಕೀರ್ತಿ ತಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ.

— ಕೃಷ್ಣ ಜೆ. ಪಾಲೇಮಾರ್, ಮಾಜಿ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net