

ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಅರಣ್ಯದ ಕಾಡಂಚಿನ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶುಕ್ರವಾರ ಸಾಕಾನೆ ಮೂಲಕ ಕೂಂಬಿಂಗ್ ಆರಂಭಿಸಿದೆ.
ಬಂಡೀಪುರ ಹುಲಿ ಯೋಜನೆ ಮದ್ದೂರು ವಲಯದ ಕಾಡಂಚಿನ ಮದ್ದಯ್ಯನಹುಂಡಿ, ಬೇರಂಬಾಡಿ, ಚೆನ್ನಮಲ್ಲಿಪುರ ಗ್ರಾಮಗಳ ಜಮೀನುಗಳಲ್ಲಿ ಪದೇ ಪದೆ ಹುಲಿ ಕಾಣಿಸಿಕೊಳ್ಳುತ್ತಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು ಜಮಿನುಗಳಿಗೆ ಹೋಗಲು ಹೆದರುತ್ತಿದ್ದು ಇದರ ಸೆರೆಗೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಾಕಾನೆ ರೋಹಿತ್ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ನೆರವಿನಿಂದ ಕೂಂಬಿಂಗ್ ನಡೆಸಿದರು. ಸಾಕಾನೆ ಜತೆಗೆ ಜೊತೆಗೆ ಡ್ರೋನ್ ಕೂಡ ಬಳಕೆ ಮಾಡಲಾಗಿದೆ.
ಚೆನ್ನಮಲ್ಲಿಪುರ, ಬೇರಂಬಾಡಿ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಕಂಡುಬಂದಿದ್ದು, ಇದನ್ನು ಆಧರಿಸಿ ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಹಾಗೂ ಮದ್ದೂರು ವಲಯದ ಡಿಆರ್‌ಎಫ್ ರವಿಸಂಗೂರ್, ಗುಂಡ್ಲುಪೇಟೆ ಬಫರ್ ವಲಯ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಹುಲಿ ಕಣ್ಣಿಗೆ ಬಿದ್ದಿದ್ದು ಅದರ ಆರೋಗ್ಯದ ಸ್ಥಿತಿಗತಿ ಪತ್ತೆಗೆ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಒಂದುವೇಳೆ ಅದಕ್ಕೆ ಗಾಯಗಳಾಗಿದ್ದರೆ ಸೆರೆಹಿಡಿದು ಚಿಕಿತ್ಸೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.