1.84 ಲಕ್ಷ ಬೀದಿನಾಯಿಗಳಿಗೆ ಸಂಯುಕ್ತ ಲಸಿಕೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

streetdog vaccine
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿನಾಯಿಗಳಿಗೆ ಸಂಯುಕ್ತ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿ ಸಮುದಾಯ ನಾಯಿಗಳಿಗೆ ಸಂಯುಕ್ತ ಲಸಿಕೆ ಅಳವಡಿಸುವ ಕಾರ್ಯಕ್ರಮಕ್ಕೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಬಿಬಿಎಂಪಿ ವತಿಯಿಂದ ಸಂಯುಕ್ತ ಲಸಿಕೆ ನೀಡಲಾಗುತ್ತಿದೆ. ವ್ಯಾಕ್ಸಿನ್ ಮತ್ತು ಕೋಲ್ಡ್ ಸ್ಟೋರೇಜ್ಗಾಗಿ 4.98 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.

ಪಶುಪಾಲನಾ ವಿಭಾಗದಿಂದ ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬೀಸ್ ರೋಗ ನಿರೋಧಕ ಲಸಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ರೇಬೀಸ್ ಲಸಿಕೆ ಹೊರತುಪಡಿಸಿ ಬೀದಿನಾಯಿಗಳಲ್ಲಿ ಹಲವು ಮಾರಾಣಾಂತಿಕ ಸಾಂಕ್ರಾಮಿಕ ರೋಗ ಹಾಗೂ ಮನುಷ್ಯರಿಗೆ ನಾಯಿಗಳಿಂದ ಹರಡಬಹುದಾದ ರೋಗಗಳ ತಡೆಗೆ ಸಂಯುಕ್ತ ಲಸಿಕೆ ಕಾರ್ಯಕ್ರಮವನ್ನು ನಿರ್ವಹಿಸುವುದು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಐದು ರೋಗಗಳು ಮಾರಕ:

ಬೀದಿನಾಯಿಗಳಿಗೆ 5 ರೋಗಗಳು ತುಂಬಾ ಮಾರಕವಾಗಿವೆ. ಈ ರೋಗಗಳಿಂದ ಬೀದಿನಾಯಿಗಳ ರಕ್ಷಣೆ ಹಾಗೂ ನಾಯಿಗಳಿಂದ ಮಾನವನಿಗೆ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಈ ಸಂಯುಕ್ತ ಲಸಿಕೆಯು ಅತ್ಯವಶ್ಯಕವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವಂತಹ ನಾಗರಿಕರ ಆರೋಗ್ಯ ಕಾಪಾಡುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ. ಇದೇ ರೀತಿ ಪಾಲಿಕೆ ವ್ಯಾಪ್ತಿಯ ಬೀದಿನಾಯಿಗಳ ಆರೋಗ್ಯ ಕಾಪಾಡವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.

ಪಾಲಿಕೆಯ ವ್ಯಾಪ್ತಿಯಲ್ಲಿ 2023ನೇ ಸಾಲಿನ ಬೀದಿನಾಯಿ ಸಮೀಕ್ಷೆಯಲ್ಲಿ ಅಂದಾಜಿಸಲಾಗಿರುವ 2.79 ಲಕ್ಷ ಬೀದಿನಾಯಿಗಳಲ್ಲಿ ಶೇ.50ಕ್ಕೂ ಹೆಚ್ಚು ಪ್ರಸಕ್ತ ಸಾಲಿನಲ್ಲಿ ಸಂಯುಕ್ತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮುಖ್ಯ ಆಯುಕ್ತರು ವಿವರಿಸಿದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಯಲಹಂಕ ವಲಯದ ಆಯುಕ್ತ ಕರೀಗೌಡ, ಜಂಟಿ ನಿರ್ದೇಶಕ ಡಾ. ಚಂದ್ರಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net