ಡಾ.ನರೇಂದ್ರ ರೈಯವರ ಅಂಕಣಗಳ ಕೃತಿ ಬಿಡುಗಡೆ

BOOK NEW
Published on

ಪುತ್ತೂರು: ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡ ಪತ್ರಕರ್ತ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಅವರ ಅಂಕಣಗಳ ಬರಹದ ‘ಬೇರು ಬದುಕು’ ಕೃತಿಯ ಸಹಿತ ಮೂರು ಹೊಸ ಪುಸ್ತಕಗಳು ಬಿಡುಗಡೆಗೊಂಡಿವೆ. ಹಳ್ಳಿಯ ಆತ್ಮಕಥೆ ಮತ್ತು ಕರೊನಾ ನಂತರದ ಗ್ರಾಮಭಾರತ ಇನ್ನೆರಡು ಕೃತಿಗಳು.

ಕೋವಿಡ್- 19ರ ಸಂಕಷ್ಟ ಕಾಲದಲ್ಲಿ ಸಮಾರಂಭ ರಹಿತವಾಗಿ ಕರಾವಳಿಯ ಕೃಷಿಕ, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಪೈಲೂರು ಶ್ರೀನಿವಾಸ ರಾವ್, ಗೋಪಾಲಕೃಷ್ಣ ಶ್ಯಾನುಭಾಗ ಹಾಗೂ ‘ಐಟಿಯಿಂದ ಮೇಟಿ’ ಕೃತಿ ಖ್ಯಾತಿಯ ವಸಂತ ಕಜೆ ತಮ್ಮ ಮನೆಗಳಲ್ಲೇ ಲೋಕಾರ್ಪಣೆಗೊಳಿಸಿದರು.

ಹದಿನೆಂಟು ಪ್ರಬಂಧಗಳ ಸಂಕಲನವಾದ ಹಳ್ಳಿಯ ಆತ್ಮಕಥೆಯನ್ನು ಸುಳ್ಯ ಚೊಕ್ಕಾಡಿಯ ಪೈಲೂರರ ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀನಿವಾಸ ರಾವ್ ಪುತ್ರ ಡಾ.ಶಿವರಾಮ ಪೈಲೂರು ಹಾಜರಿದ್ದು, ನೂತನ ಕೃತಿಗಳ ಕುರಿತು ಸಾಕ್ಷ್ಯಚಿತ್ರ ಪ್ರಸ್ತುತಪಡಿಸಿದರು. ಎರಡನೆಯ ಕೃತಿ ಬೇರು ಬದುಕುನ್ನು ಕೃಷಿಕ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ತಮ್ಮ ಮನೆಮಂದಿಯೊಂದಿಗೆ ಬಿಡುಗಡೆಗೊಳಿಸಿದರು. ಬೇರು ಬದುಕು ದೇರ್ಲರ ವಿಜಯವಾಣಿ ಅಂಕಣದ ನಾಲ್ಕನೆಯ ಸಂಪುಟ. ಕಳೆದ ವರ್ಷ ಬಿಡುಗಡೆಗೊಂಡ ಮೂರನೆಯ ಸಂಪುಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಡಾ.ಹಾ.ಮಾ.ನಾಯಕ ಅಂಕಣ ಪ್ರಶಸ್ತಿ ಲಭಿಸಿತ್ತು.

ಕರೊನಾ ನಂತರದ ಗ್ರಾಮಭಾರತ ಕೃತಿಯನ್ನು ಮಂಚಿಯ ಯುವ ಕೃಷಿಕ ವಸಂತ ಕಜೆ ಬಿಡುಗಡೆಗೊಳಿಸಿದರು. ಮೂರೂ ಕಡೆಯೂ ಲೇಖಕ ನರೇಂದ್ರ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net