

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾದ ನಾಲ್ಕು ದಿನಗಳ ಕರ್ನಾಟಕ ಕುಸ್ತಿ ಹಬ್ಬ ಮಂಗಳವಾರ ರಾತ್ರಿ ವರ್ಣರಂಜಿತ ತೆರೆ ಕಂಡಿತು. ಅಂತಾರಾಷ್ಟ್ರೀಯ ಮಹಿಳಾ ಮತ್ತು ಪುರುಷ ಕುಸ್ತಿ ಪಟುಗಳು ತುರುಸಿನ ಸ್ಪರ್ಧೆಯಲ್ಲಿ ಸೆಣಸಿ, ಸಾರ್ವಜನಿಕರು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಕರ್ನಾಟಕ ಕಾಲೇಜು ಆವರಣದಲ್ಲಿ ಕರ್ನಾಟಕ ಕುಸ್ತಿ ಹಬ್ಬದಲ್ಲಿ ವಿಜೇತರಾದ ಕುಸ್ತಿಪಟುಗಳಿಗೆ ಮಂಗಳವಾರ ರಾತ್ರಿ ಆಯೋಜಿಸಿದ್ದ ಸಮಾರಂಭದಲ್ಲಿ ಬಾಲ ಕೇಸರಿ, ಕರ್ನಾಟಕ ಕಿಶೋರ, ಕಿಶೋರಿ, ಕರ್ನಾಟಕ ಕೇಸರಿ, ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಳು ಸೇರಿ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.
ಪದ್ಮಶ್ರೀ ಪುರಸ್ಕೃತ ಹಾಗೂ ಒಲಿಂಪಿಯನ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕರ್ತಾರ ಸಿಂಗ್, ಒಲಿಂಪಿಕ್ ಕಂಚಿನ ಪದಕ ವಿಜೇತ ಪದ್ಮಶ್ರೀ ಹಾಗೂ ಅರ್ಜುನ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಯೋಗೇಶ್ವರ ದತ್ತ ಆಗಮಿಸಿ ಕುಸ್ತಿ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದರು.
ಮಂಗಳವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಮುಜರಾಯಿ, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಸಿ. ಸತೀಶ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ವಿಜೇತ ಕುಸ್ತಿಪಟುಗಳಿಗೆ ಬಹುಮಾನ ವಿತರಣೆ ಮಾಡಿದರು.
ರೋಚಕ ಕುಸ್ತಿ ಪಂದ್ಯ ವೀಕ್ಷಣೆಗೆ ಗ್ರಾಮೀಣ ಭಾಗದವರು ಸೇರಿ 50 ಸಾವಿರಕ್ಕಿಂತ ಹೆಚ್ಚು ಜನರು ಜಮಾಯಿಸಿದ್ದರು. ಚಾರಿತ್ರಿಕ ಕುಸ್ತಿ ಹಬ್ಬಕ್ಕೆ ಧಾರವಾಡದ ಕರ್ನಾಟಕ ಕಾಲೇಜು ಮೈದಾನ ಆವರಣವು ಸಾಕ್ಷಿಯಾಯಿತು.
ಬಹುಮಾನ ವಿಜೇತ ಜಟ್ಟಿಗಳು: 17 ವರ್ಷದ ಬಾಲಕಿಯರ 40 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಪ್ರತ್ಯಕ್ಷಾ ಬಿ.ಎನ್.(ಪ್ರಥಮ) 15 ಸಾವಿರ ರೂ., ಗದಗಿನ ಪ್ರಿಯಾಂಕ ಕರಿಗನ್(ದ್ವಿತೀಯ) 10 ಸಾವಿರ ಹಾಗೂ ದಾವಣಗೆರೆಯ ನಂದಿನಿ ಟಿ. ಮತ್ತು ಬಾಗಲಕೋಟೆಯ ಅರ್ಚನಾ ಪಟ್ಟೇದಾರ (ತೃತೀಯ) 7500 ರೂ.ಗಳ ಬಹುಮಾನ ಪಡೆದರು.
17 ವರ್ಷದ ಬಾಲಕಿಯರ 43 ಕೆ.ಜಿ. ವಿಭಾಗದಲ್ಲಿ ಗದಗಿನ ಶ್ವೇತಾ ಜಾಧವ (ಪ್ರ) 15 ಸಾವಿರ, ದಾವಣಗೆರೆಯ ತೇಜಸ್ವಿನಿ ಕೆ.ಎಲ್. (ದ್ವಿ) 10 ಸಾವಿರ ರೂ. ಬಹುಮಾನ; 17 ವರ್ಷದ ಬಾಲಕಿಯರ 46 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಕಾವೇರಿ ಕೆ.ವೈ. (ಪ್ರ) 15 ಸಾವಿರ, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಕ್ಷಾ ಕೆ.ಆರ್.(ದ್ವಿ) 10 ಸಾವಿರ ಹಾಗೂ ಬಾಗಲಕೋಟೆಯ ಕಾವೇರಿ ಮುಳವಾಡ, ಬೆಳಗಾವಿಯ ಅಸ್ಮಿತಾ ಪಟೇಲ್ (ತೃ) 7500 ರೂ. ಬಹುಮಾನ ಪಡೆದರು.
53 ಕೆ.ಜಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಾಲಿನಿ ಸಿದ್ಧಿ 75 ಸಾವಿರ ರೂ. ಬಹುಮಾನದ ಕರ್ನಾಟಕ ಕಿಶೋರಿ ಪ್ರಶಸ್ತಿ ಪಡೆದರು. ಬೆಳಗಾವಿಯ ಗಾಯತ್ರಿ ತಾಳೆ (ದ್ವಿತೀಯ) 50 ಸಾವಿರ ಹಾಗೂ ಉತ್ತರ ಕನ್ನಡದ ಜಿಲ್ಲೆಯ ಗಾಯತ್ರಿ ಸುತಾರ, ಸುಜಾತಾ ಪಟೇಲ್ (ತೃ) 25 ಸಾವಿರ ರೂ. ಬಹುಮಾನ ಪಡೆದರು.
17 ವರ್ಷದ ಬಾಲಕಿಯರ 49 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಐಶ್ವರ್ಯ ಎಸ್.ಬಿ. (ಪ್ರ) 20 ಸಾವಿರ, ಧಾರವಾಡದ ಐಶ್ವರ್ಯಾ ಎಚ್.ಎಂ. (ದ್ವಿ) 15 ಸಾವಿರ ಹಾಗೂ ದಾವಣಗೆರೆಯ ನಂದಿನಿ ಟಿ. 7500 ರೂ. ಬಹುಮಾನ ಗಳಿಸಿದರು.
17 ವರ್ಷದ ಬಾಲಕಿಯರ 57 ಕೆ.ಜಿ. ವಿಭಾಗದಲ್ಲಿ ಉತ್ತರ ಕನ್ನಡದ ನಿಖಿತಾ ವಿ.ಡಿ (ಪ್ರ) 25 ಸಾವಿರ, ಬೆಳಗಾವಿಯ ಸೀಮಾ ಪಟೇಲ್ (ದ್ವಿ) 20 ಸಾವಿರ ಹಾಗೂ ಬೆಳಗಾವಿಯ ಕುಸುಮಾ ಎಂ.ಎ., ದಾವಣಗೆರೆ ಜಿಲ್ಲೆಯ ಆಫ್ರಾ ಎನ್. (ತೃ) 10 ಸಾವಿರ ರೂ.;
65 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಬೌರವ್ವ ನಂದ್ಯಾಗೋಳ (ಪ್ರ) 25 ಸಾವಿರ, ದಾವಣಗೆರೆಯ ಗೌರಿ ಎಚ್. ಎಸ್. (ದ್ವಿ) 20 ಸಾವಿರ ಹಾಗೂ ದಕ್ಷಿಣ ಕನ್ನಡದ ಅಕ್ಷತಾ ಎ (ತೃ) 10 ಸಾವಿರ ರೂ.; 73 ಕೆ.ಜಿ. ವಿಭಾಗದಲ್ಲಿ ದಕ್ಷಿಣ ಕನ್ನಡದ ಧನ್ಯಾ ಟಿ.ಯು. (ಪ್ರ) 25 ಸಾವಿರ, ಬೆಳಗಾವಿಯ ದಾನೇಶ್ವರಿ ಪೂಜಾರಿ (ದ್ವಿ ) 20 ಸಾವಿರ ಹಾಗೂ ದಕ್ಷಿಣ ಕನ್ನಡದ ಮೇಘನಾ ಬಿ. (ತೃ) 10 ಸಾವಿರ ರೂ. ಬಹುಮಾನ ಪಡೆದರು.
14 ವರ್ಷದೊಳಗಿನ ಬಾಲಕಿಯರ 33 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ರುತುಜಾ ಎಸ್.ಜಿ. (ಪ್ರ) 12,500, ಗದಗಿನ ತ್ರಿವೇಣಿ ಮುರಖಂಡಿ (ದ್ವಿ) 10 ಸಾವಿರ, ಬಾಗಲಕೋಟೆಯ ಪೂಜಾ ವಗೇನ್ನವರ ಮತ್ತು ಉತ್ತರ ಕನ್ನಡದ ಕಾವ್ಯಾ ತುಕಾರಾಂ (ತೃ) 5 ಸಾವಿರ ರೂ.; 36 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಅಮೂಲ್ಯ ಕೆ. (ಪ್ರ) 12,500, ಬೆಳಗಾವಿಯ ತ್ರಿಶಾ ಪಟೇಲ್ (ದ್ವಿ) 10 ಸಾವಿರ, ಉತ್ತರಕನ್ನಡ ಜಿಲ್ಲೆಯ ರಾಧಿಕಾ ವಿ.ಕೆ. ಮತ್ತು ದಕ್ಷಿಣಕನ್ನಡ ಜಿಲ್ಲೆಯ ಜೀಯಾ ಪ್ರಶಾಂತಕುಮಾರ (ತೃ) 5 ಸಾವಿರ ರೂ.; 39 ಕೆ.ಜಿ.ಬಾಗಲಕೋಟೆಯ ಕಲ್ಪನಾ ಕೆಂಪಣ್ಣವರ (ಪ್ರ) 12,500, ಬೆಳಗಾವಿಯ ಸಾನಿಕಾ ಪಟೇಲ್ (ದ್ವಿ) 10 ಸಾವಿರ, ಬಾಗಲಕೋಟೆಯ ಭಾಗ್ಯಶ್ರೀ ಬಿ.ಜಿ. ಮತ್ತು ಬೆಳಗಾಂನ ಶೃತಿಕಾ ಎಸ್.ಪಿ. (ತೃ) 5 ಸಾವಿರ ರೂ.; 42 ಕೆ.ಜಿ.ಯಲ್ಲಿ ಉತ್ತರ ಕನ್ನಡದ ಲಕ್ಷ್ಮೀ ಪಾಟೀಲ್ (ಪ್ರ) 12500, ಬೆಳಗಾವಿಯ ಪ್ರಾಂಜಲ್ ಟಿ. (ದ್ವಿ) 10 ಸಾವಿರ, ದಕ್ಷಿಣ ಕನ್ನಡದ ದೀಕ್ಷಾ ಕರ್ಕೆರ ಮತ್ತು ಬಾಗಲಕೋಟೆಯ ಪ್ರತ್ಯಕ್ಷ ಭೋವಿ (ತೃ) 7500 ರೂ.; 46 ಕೆ.ಜಿ.ಯಲ್ಲಿ ಉತ್ತರ ಕನ್ನಡದ ಶ್ವೇತಾ ಎಸ್.ಎ. (ಪ್ರ) 50 ಸಾವಿರ, ಬೆಳಗಾವಿಯ ಸ್ವಾತಿ ಪಾಟೀಲ (ದ್ವಿ) 32500, ದಕ್ಷಿಣ ಕನ್ನಡದ ಅಲ್ಮಾ ಲಡಿಸ್ ಪಿಂಟೋ ಮತ್ತು ಉತ್ತರ ಕನ್ನಡದ ಅನನ್ಯಾ ಎಸ್.ಜಿ. (ತೃ) 12,500 ರೂ.; 50 ಕೆ.ಜಿಯಲ್ಲಿ ವಿಜಯಪುರದ ಭಾಗ್ಯವತಿ ಜೆ.ಜಿ. (ಪ್ರ) 12500,
ಬಾಗಲಕೋಟೆಯ ಲಕ್ಷ್ಮೀ ಯು.ಪಿ. (ದ್ವಿ) 10 ಸಾವಿರ, ಉತ್ತರ ಕನ್ನಡದ ಪ್ರಿನ್ಸಿತಾ ಸಿದ್ಧಿ ಮತ್ತು ಬೆಳಗಾವಿಯ ಇಂಚರ ಕೆ.ಎಸ್.(ತೃ) 7500 ರೂ.; 54 ಕೆ.ಜಿ.ಯಲ್ಲಿ ದಕ್ಷಿಣ ಕನ್ನಡದ ಎಸ್. ಕ್ಯಾತರಿನಾ (ಪ್ರ) 12500,ಬಾಗಲಕೋಟೆಯ ರಕ್ಷಿತಾ ಹಾಲಿನಗಾಳಿ (ದ್ವಿ) 10 ಸಾವಿರ ರೂ.; 58 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ವಿದ್ಯಾಶ್ರೀ ಎನ್.ಬಿ. (ಪ್ರ) 12500, ದಕ್ಷಿಣ ಕನ್ನಡದ ವೈಷ್ಣವಿ ಪುಥರಾನ (ದ್ವಿ) 10 ಸಾವಿರ ರೂ.ಗಳ ಬಹುಮಾನ ಪಡೆದರು.