

ಹಳೇಬೀಡು: ಎರಡು ದಿನಗಳ ಕಾಲ ನಡೆಯಲಿರುವ ಪುಷ್ಪಗಿರಿ ಸಾಂಸ್ಕೃತಿಕ ಉತ್ಸವಕ್ಕೆ ಇಲ್ಲಿನ ರಾಜನಸಿರಿಯೂರು ವೃತ್ತದಲ್ಲಿ ಕಲಾತಂಡಗಳನ್ನು ಮುನ್ನೆಡೆಸುವ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು.
ಶನಿವಾರ ಮಧ್ಯಾಹ್ನ 12 ಗಂಟೆಗೆ ವೃತ್ತದಲ್ಲಿ ಪುಷ್ಪಗಿರಿ ಶ್ರೀಗಳು, ಶಾಸಕರಾದ ಕೆ.ಎಸ್.ಲಿಂಗೇಶ್, ಬೆಳ್ಳಿ ಪ್ರಕಾಶ್ ಮತ್ತಿತರ ಗಣ್ಯರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. 50ಕ್ಕೂ ಹೆಚ್ಚು ಜಾನಪದ ತಂಡಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಜಾವಗಲ್, ಹೊಯ್ಸಳ ವೃತ್ತದ ಮೂಲಕ ಮೆರವಣಿಗೆ ವೇದಿಕೆ ತಲುಪುವ ವೇಳೆಗೆ ಸಾವಿರಾರು ಜನರು ತಂಡಗಳ ಜತೆ ಜಮಾಯಿಸಿದ್ದರು. ಹುಲಿವೇಷ, ವೀರಗಾಸೆ ನೃತ್ಯ, ಚಂಡೆವಾದ್ಯ, ಕೊಂಬು-ಕಹಳೆ, ನಗಾರಿ ತಂಡ, ಕೋಲಾಟದ ಪ್ರದರ್ಶನ ಜನರನ್ನು ರಂಜಿಸಿತು.
ಚಲನಚಿತ್ರ ನಟದೊಡ್ಡಣ್ಣ, ಡಾಲಿ ಧನಂಜಯ್ ಮೆರವಣಿಗೆಯಲ್ಲಿ ಸೇರಿಕೊಂಡು ಕಲಾಪ್ರದರ್ಶನಕ್ಕೆ ಇನ್ನಷ್ಟು ರಂಗೇರಿಸಿದರು. ಗ್ರಾಮೀಣ ಸೊಬಗನ್ನು ಪ್ರತಿಬಿಂಬಿಸುವ ಸಲುವಾಗಿ ಮರದ ಚಕ್ರದ ಎತ್ತಿನಗಾಡಿಗಳಿಗೆ ಬಣ್ಣದ ಹೂಗಳನ್ನು ಏರಿಸಿ ಅಲಂಕರಿಸಲಾಗಿತ್ತು. ಗಾಡಿಯ ಜೋಡೆತ್ತುಗಳಿಗೂ ಅಲಂಕಾರ ಮಾಡಿ ಮೆರವಣಿಗೆಯ ಉದ್ದಕ್ಕೂ ಕರೆ ತರಲಾಯಿತು. 2 ಗಂಟೆಗೆ ಸಮಾರಂಭದ ವೇದಿಕೆ ತಲುಪಿದ ತಂಡಗಳು ಕಾರ್ಯಕ್ರಮದ ಬಳಿಕ 4 ಗಂಟೆಗೆ ಪುನಃ ಪುಷ್ಪಗಿರಿ ಬಯಲು ರಂಗಮಂದಿರದ ಕಡೆಗೆ ಪ್ರಯಾಣ ಬೆಳೆಸಿದವು.
ಬಿಸಿಲಲ್ಲಿ ಬಳಲಿ ಬೆಂಡಾದ ಜನತೆ: ಪುಷ್ಪಗಿರಿ ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮನದ ನಿರೀಕ್ಷೆಯಲ್ಲಿದ್ದ ಜನತೆ ಸೂಕ್ತ ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬಿಸಿಲಲ್ಲಿ ಬಳಲಿ ಬೆಂಡಾದರು.
ಶನಿವಾರ ಹಳೇಬೀಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ವೇದಿಕೆ ಹೊರತುಪಡಿಸಿ ಮತ್ತೆಲ್ಲೂ ನೆರಳಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನಸ್ತೋಮ ಬಿಸಿಲಲ್ಲಿ ಬಳಲುವಂತಾಯಿತು. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಆಗದ ಪರಿಣಾಮ ಸಾರ್ವಜನಿಕರು ಪರಿತಪಿಸಿದರು.
ಮಧ್ಯಾಹ್ನ 12 ಗಂಟೆಯಿಂದಲೇ ಕಾದು ಕುಳಿತಿದ್ದವರು ಕಾರ್ಯಕ್ರಮ ಆರಂಭವಾಗುವ ವೇಳೆಗೆ ಅಲಲ್ಲಿ ನೆರಳು ಹುಡುಕುವ ಕಾರ್ಯದಲ್ಲಿ ಚದುರಿಹೋದರು. ಹೀಗಾಗಿ ಕೆಲ ಸಮಯ ಜನಸಂಖ್ಯೆ ಕೊರತೆಯೂ ಕಾರ್ಯಕ್ರಮದಲ್ಲಿ ಕಾಡಿತು. ಸಿಎಂ ಆಗಮಿಸಿದ ಬಳಿಕ ಸೇರಿದ ಜನಸ್ತೋಮ ಅವರು ನಿರ್ಗಮಿಸುತ್ತಿದ್ದಂತೆ ಖಾಲಿಯಾದರು. ಬಿಸಿಲಿನಲ್ಲಿ ಜನತೆಯನ್ನು ಕೂರಿಸಿದ್ದಕ್ಕೆ ಬಿಎಸ್‌ವೈ ವೇದಿಕೆಯಲ್ಲೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಆಯೋಜಕರ ಪರವಾಗಿ ಪುಷ್ಪಗಿರಿ ಶ್ರೀ ಕ್ಷಮೆ ಕೇಳಿದರು.
ಹಾಸನ ಜಿಲ್ಲೆಯಲ್ಲೂ ಅಸಂತೃಪ್ತ ಜನರಿದ್ದಾರೆ: ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸಾರ್ವಜನಿಕ ಬದುಕಿನಲ್ಲಿ ನಮ್ಮ ವೈಯಕ್ತಿಕ ಮನೆ, ಸಂಸಾರಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಮಠಗಳಿಗೂ ಕೊಡಬೇಕು. ಜೀವನದಲ್ಲಿ ಜಿಗುಪ್ಸೆ ಬರುವಂತಹ ಸಂದರ್ಭಗಳಲ್ಲಿ ಮಠ- ಮಾನ್ಯಗಳು ಜನರ ಮನಸ್ಥಿತಿಯನ್ನು ಬದಲಿಸಿ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.
ಇಲ್ಲಿಯವರೆಗೂ ಹಾಸನ ಜಿಲ್ಲೆ ಎಂದರೆ ಸಂತೃಪ್ತ ಪ್ರದೇಶ ಎಂದೇ ಭಾವಿಸಲಾಗಿತ್ತು. ನಾನು ಉಸ್ತುವಾರಿ ಸಚಿವನಾದ ಬಳಿಕ ಈ ಭೂ ಪ್ರದೇಶದ ವೈವಿಧ್ಯತೆಯನ್ನು ಗಮನಿಸಿದೆ. ಒಂದೆಡೆ ಮಲೆನಾಡಿನಲ್ಲಿ ಮಳೆ ಸುರಿಯುತ್ತಿದ್ದರೆ ಬೇಲೂರು ತಾಲೂಕಿನ ಅನೇಕ ಊರುಗಳು ಬರಪೀಡಿತ ಪ್ರದೇಶವಾಗಿದ್ದವು. ಹಾಗಾಗಿ ಇಲ್ಲಿಯೂ ಬವಣೆ ಪಡುತ್ತಿರುವ ಜನರಿದ್ದಾರೆ ಎಂಬುದು ಅರಿವಾಗಿದೆ. ಇಷ್ಟು ವರ್ಷಗಳ ಕಾಲ ಹಾಸನ ಜಿಲ್ಲೆಯನ್ನು ಆಳಿದವರು ಏನು ಮಾಡಿದ್ದಾರೆ ಎಂಬುದನ್ನು ಜನರೇ ತಿಳಿದುಕೊಂಡಿದ್ದಾರೆ. ಇನ್ನು ಮುಂದೆ ಈ ಭಾಗದ ನೀರಾವರಿ ಯೋಜನೆಗಳನ್ನು ತಾರತಮ್ಯವಿಲ್ಲದೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ರಣಘಟ್ಟ ಯೋಜನೆ ರೂವಾರಿ ಯಡಿಯೂರಪ್ಪರೇ ಆಗಲಿ: ಸಮಾರಂಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕೇವಲ ಕಾಗದ ಪತ್ರದಲ್ಲಿಯೇ ಉಳಿದಿದೆ. ಅದಕ್ಕೆ ಬೇಕಾಗುವ ಸಂಪನ್ಮೂಲವನ್ನು ಹೊಂದಿಸಿಕೊಟ್ಟಿರಲಿಲ್ಲ. ಯಡಿಯೂರಪ್ಪನವರು ಈ ಮಹತ್ವದ ಯೋಜನೆಗೆ ಅನುದಾನ ಮಂಜೂರು ಮಾಡಿ, ಇದೇ ವರ್ಷ ಕಾಮಗಾರಿ ಆರಂಭವಾಗುವಂತೆ ಮಾಡಬೇಕು. ಆ ಮೂಲಕ ಮಹತ್ವಾಕಾಂಕ್ಷೆಯ ಯೋಜನೆಯ ರೂವಾರಿ ಯಡಿಯೂರಪ್ಪನವರೇ ಆಗಬೇಕು ಎನ್ನುವುದು ಈ ಭಾಗದ ಜನತೆಯ ಮತ್ತು ವೈಯಕ್ತಿಕವಾಗಿ ನನ್ನ ಆಶಯ ಕೂಡ ಎಂದರು.
ಪುಷ್ಪಗಿರಿ ಸ್ವಾಮೀಜಿ ಚಿಕ್ಕ ವಯಸ್ಸಿನಲ್ಲಿಯೆ ಸನ್ಯಾಸ ಸ್ವೀಕರಿಸಿ, ತಮ್ಮ ಮಠವನ್ನು ಜನಪರವಾಗಿ ಬೆಳೆಸಿದ್ದಾರೆ. ಭವಿಷ್ಯದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಇನ್ನಷ್ಷು ವಿಸ್ತಾರವಾಗಿ ಬೆಳೆಯಲಿ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟ ಪುನೀತ್ ರಾಜ್‌ಕುಮಾರ್, ಶಾಸಕ ಕೆ.ಎಸ್.ಲಿಂಗೇಶ್, ಪ್ರೀತಂ ಜೆ.ಗೌಡ, ಬೆಳ್ಳಿ ಪ್ರಕಾಶ್, ಮಾಜಿ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ, ಮಾಜಿ ಸಚಿವ ಬಿ. ಶಿವರಾಂ, ಮಾಜಿ ಶಾಸಕ ವಿಶ್ವನಾಥ್, ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್, ಕೊರಟಗೆರೆ ಪ್ರಕಾಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಪಂ ಸದಸ್ಯ ಎಚ್.ಎಂ. ಮಂಜಪ್ಪ, ಗ್ರಾಪಂ ಅಧ್ಯಕ್ಷೆ ಗೌರಮ್ಮ ಮತ್ತಿತರರಿದ್ದರು.