

ಮೈಸೂರು: ನಗರದ ಜೆಕೆ ಮೈದಾನದಲ್ಲಿ ಮಹಿಳಾ ದಸರಾ ಉಪ ಸಮಿತಿ ಹಮ್ಮಿಕೊಂಡಿದ್ದ ಮಹಿಳಾ ದಸರಾ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವರ್ಣ ರಂಜಿತ ತೆರೆ ಕಂಡಿತು.
ಮಹಿಳೆಯರು ಹಾಗೂ ಮಕ್ಕಳು ವಿವಿಧ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಮಕ್ಕಳ ಕುಂಗ್‌ಫೂ ಪ್ರದರ್ಶನ ಆಕರ್ಷಕವಾಗಿತ್ತು. ಇಂಡಿಯಾ ಬುಕ್ ಆಫ್ ರೆಕಾರ್ಡ್ ಖ್ಯಾತಿಯ ಆದ್ಯಲಕ್ಷ್ಮೀ ಭರತ ನಾಟ್ಯ ಪ್ರದರ್ಶಿಸಿದರು. ಚಿಣ್ಣರ ವೇಷಭೂಷಣ ಸ್ಪರ್ಧೆ ಆಕರ್ಷಕವಾಗಿತ್ತು. ಶ್ರೀ ವೆಂಕಟೇಶ್ವರ, ರಾಧೆ ಕೃಷ್ಣ, ಕಿತ್ತೂರು ರಾಣಿ ಚೆನ್ನಮ್ಮ, ನವಿಲು ಸೇರಿದಂತೆ ವಿವಿಧ ವೇಷಭೂಷಣ ತೊಟ್ಟು ಮಕ್ಕಳು ಗಮನ ಸೆಳೆದರು.
ಇದೇ ಸಂದರ್ಭ ನಡೆದ ಜನಪದ ಶೈಲಿಯ ಜಾದು ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು. ಶೆಲ್‌ಮ್ಯೂಸಿಯಂ ನಿರ್ಮಾಣ ಮಾಡಿ ಸಾಧನೆ ಗೈದ ಸಾಧಕಿ ರಾಧಾ ಮಲ್ಲಪ್ಪ ಮಹಿಳೆಯೊಂದಿಗೆ ಸಂವಾದ ನಡೆಸಿಕೊಟ್ಟರು.
ಲಿಂಗತ್ವ ಅಲ್ಪಸಂಖ್ಯಾತರಾದ ಅಕ್ಕೈ ಪದ್ಮಶಾಲಿ ಮಹಿಳೆಯರೊಂದಿಗೆ ಲಿಂಗತ್ವ ಅಲ್ಪಸಂಖ್ಯಾತರ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಮಾತನಾಡಿದರು. ಇದೇ ಸಂದರ್ಭ ಲಿಂಗತ್ವ ಅಲ್ಪಸಂಖ್ಯಾತರಾದ ರಕ್ಷಿತಾ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.
ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಕುಂಟೆ ಬಿಲ್ಲೆ ಆಟೋಟ ಸ್ಪರ್ಧೆಗಳು, ವೆಜಿಟೆಬಲ್ ಕಾರ್ವಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.