ಗುಂಡಿಹೊಂಬಳ ಶಾಲೆಗೆ ಬಣ್ಣದ ಚಿತ್ತಾರ

27bhr 7
ಖಾಂಡ್ಯ ಶೌರ್ಯ ವಿಪತ್ತು ಘಟಕದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನದಡಿ ಬಾಳೆಹೊನ್ನೂರು ಸಮೀಪದ ಬಿದರೆ ಗುಂಡಿಹೊಂಬಳ ಶಾಲೆಗೆ ಬೆಂಗಳೂರಿನ ಗಂಧದ ಗುಡಿ ಬಳಗ ಸಾಮಾಜಿಕ ಸೇವಾ ತಂಡದಿಂದ ಬಣ್ಣ ಬಳಿದು ವಿವಿಧ ಚಿತ್ತಾರಗಳನ್ನು ಬಿಡಿಸಿರುವುದು.
Published on

ಬಾಳೆಹೊನ್ನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಆರಂಭಿಸಿರುವ ಖಾಂಡ್ಯ ಹೋಬಳಿಯ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಸ್ಪಂದಿಸಿರುವ ಬೆಂಗಳೂರಿನ ಗಂಧದ ಗುಡಿ ಬಳಗ ಬಿದರೆ ಗುಂಡಿ ಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಬಣ್ಣ ಹಾಗೂ ಚಿತ್ತಾರ ಬಳಿಯುವ ಮೂಲಕ ಸ್ಪಂದಿಸಿದೆ.
ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ವಿ.ಸಿ.ರಘುಪತಿ ಬಿದರೆ ಈ ಕುರಿತು ಮಾಹಿತಿ ನೀಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಸ್ಪಂದಿಸಿದ ಗಂಧದ ಗುಡಿ ಬಳಗ ಎರಡು ತಿಂಗಳಿಂದ ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಅಭಿಯಾನ ಪ್ರಾರಂಭಿಸಿ ದಾನಿಗಳಿಂದ ಸಹಾಯಧನ ಸಂಗ್ರಹಿಸಿ ಬಿದರೆ ಗುಂಡಿಹೊಂಬಳ ಶಾಲೆಯ ಕೊಠಡಿಗೆ ಬಣ್ಣ ಕೊಡಿಸಿದೆ.
ಉದ್ಯೋಗಿಗಳು, ಪೋಲಿಸ್, ಅರಣ್ಯ ಇಲಾಖೆ ನೌಕರರು ಹಾಗೂ ಗಿನ್ನಿಸ್ ದಾಖಲೆ ಮಾಡಿದ ಚಿತ್ರ ಕಲಾವಿದರನ್ನು ಸೇರ್ಪಡೆಗೊಳಿಸಿ ಕೊಠಡಿಗೆ ಸುಸಜ್ಜಿತ ಬಣ್ಣ ಹೊಡೆದು ಶಾಲೆ ಚಿತ್ರಣ ಬದಲಾಯಿಸಿದ್ದಾರೆ. ಶಾಲೆ ಮುಂಭಾಗದಲ್ಲಿ ವಿವಿಧ ಚಿತ್ರಗಳನ್ನು ರಚಿಸುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಬರಲು ಪ್ರೇರೇಪಣೆ ನೀಡಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು, ಆ ಮಕ್ಕಳೂ ಗುಣಮಟ್ಟದ ಕೊಠಡಿಯಲ್ಲಿ ಕುಳಿತುಕೊಳ್ಳುವಂತಾಗಬೇಕು ಎಂಬ ಅಶಯದೊಂದಿಗೆ ಗಂಧದ ಗುಡಿ ಬಳಗ ಶಾಲೆಗೆ ರೂ.60 ಸಾವಿರ ಮೌಲ್ಯದ ಬಣ್ಣ ನೀಡಿದೆ. ಗಂಧದ ಗುಡಿ ಬಳಗ ಹಾಗೂ ಶೌರ್ಯ ವಿಪತ್ತು ಘಟಕದ ಸದಸ್ಯರು ಒಂದು ದಿನ ಉಚಿತವಾಗಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯನ್ನು ಅಂದವಾಗಿಸಲು ಸಹಕರಿಸಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net