ದಸರೆಗೆ ಶಿಲ್ಪಕಲೆ, ಚಿತ್ರಕಲೆಯ ರಂಗು

chitrasante
Published on

ಕಲಾಮಂದಿರ ಆವರಣದಲ್ಲಿ ಶಿಬಿರ, ಪ್ರದರ್ಶನ

ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರ ಆಗಮನ

ಅವಿನಾಶ್ ಜೈನಹಳ್ಳಿ ಮೈಸೂರು
ಉದ್ಘಾಟನೆಗೂ ಮುನ್ನವೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ‘ಬಣ್ಣ’ದ ರಂಗು ಹಾಗೂ ಕಲಾಕೃತಿಗಳ ಸ್ಪರ್ಶ ನೀಡಲಿದೆ.


ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಆಯೋಜಿಸಿರುವ ‘ಶಿಲ್ಪಕಲಾ ಶಿಬಿರ’ ಸೆ. 16ರಂದು ಕಲಾಮಂದಿರ ಆವರಣದಲ್ಲಿ ಆರಂಭವಾಗಲಿದೆ. ರಾಜ್ಯದ ಪ್ರಮುಖ ಹತ್ತು ಕಲಾವಿದರು ಸೆ. 16ರಿಂದ 25ರವರೆಗೆ ಮರದ ನಾನಾ ಕಲಾಕೃತಿ ನಿರ್ಮಿಸಲಿದ್ದಾರೆ.

ಕಲಬುರಗಿ ಜಿಲ್ಲೆಯ ಜಕಣಾಚಾರ್ಯ, ರಾಮನಗರ ಜಿಲ್ಲೆಯ ಸುಬ್ರಮಣ್ಯರಾಜೇ ಅರಸ್, ಬಾಗಲಕೋಟೆ ಜಿಲ್ಲೆಯ ವಿನಾಯಕ ಹೊಸೂರು, ಮೈಸೂರು ಜಿಲ್ಲೆಯ ಬಿ.ಎನ್.ಸುನೀಲ್, ಧಾರವಾಡ ಜಿಲ್ಲೆಯ ವಿ.ಕೆ.ರಾಘವೇಂದ್ರ, ಪ್ರಶಾಂತ್ ಗುಡಿಗಾರ್, ಹಾವೇರಿ ಜಿಲ್ಲೆಯ ನಾಗರಾಜ ಬಡಿಗೇರ, ಶಿವಮೊಗ್ಗ ಜಿಲ್ಲೆಯ ರಾಘವೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಂದನ್ ಹಾಗೂ ಬೆಂಗಳೂರಿನ ಆರ್.ಕಾಂತರಾಜ್ ಅವರನ್ನು ದಸರಾ ಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಲು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಯ್ಕೆ ಮಾಡಿದೆ. ಈ ಕಲಾವಿದರು 10 ದಿನಗಳವರೆಗೆ ಕಲಾಮಂದಿರ ಆವರಣದಲ್ಲಿ ದಸರಾ ಹಬ್ಬ, ಜಂಬೂಸವಾರಿ, ಆನೆ, ಮಹಾರಾಜ, ಮಹಾರಾಣಿ, ಅರಮನೆ ಸೇರಿದಂತೆ ಮೈಸೂರು ಪರಂಪರೆಯನ್ನು ಬಿಂಬಿಸುವಂತಹ ಕಲಾಕೃತಿಗಳನ್ನು ಕೆತ್ತಲಿದ್ದಾರೆ. ಬಳಿಕ ಎಲ್ಲ ಕಲಾಕೃತಿಗಳನ್ನು ಕಲಾಮಂದಿರದ ಆವರಣದಲ್ಲೇ ಪ್ರದರ್ಶನ ಮಾಡಲಾಗುತ್ತದೆ.

ಸೆ.16 ರಂದು ಸಂಜೆ 5 ಗಂಟೆಗೆ ಶಿಲ್ಪಕಲಾ ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಮೇಯರ್ ಶಿವಕುಮಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ಶಾಸಕ ಎಲ್.ನಾಗೇಂದ್ರ ಭಾಗವಹಿಸಲಿದ್ದಾರೆ.

ಮಂಗಳೂರಿನಿಂದ ಮರ:
ದಸರಾ ಶಿಲ್ಪಕಲಾ ಶಿಬಿರಕ್ಕಾಗಿ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಮಂಗಳೂರಿನಿಂದ ಮರದ ತುಂಡುಗಳನ್ನು ತರಿಸಿದೆ. 2 ಅಡಿ ಎತ್ತರ ಹಾಗೂ 1 ಅಡಿ ಅಗಲ ಇರುವ ಉತ್ತಮ ದರ್ಜೆಯ 10 ಮರದ ತುಂಡುಗಳನ್ನು ತರಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಪ್ರಮುಖ ಕಲಾವಿದರಿಂದ ಪ್ರಾತ್ಯಕ್ಷಿಕೆ:
ಕಲಾಮಂದಿರದ ಅಂಗಳದಲ್ಲಿ ಅ. 1ರಿಂದ 3ರವರೆಗೆ ಪ್ರಮುಖ ಕಲಾವಿದರು ತಮ್ಮ ಕಲೆಗಳ ಬಗ್ಗೆ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕಿನ್ನಾಳ ಕಲೆ (ಕೊಪ್ಪಳದ ಮುರಳಿ), ಕೌದಿ ಕಲೆ ಮತ್ತು ಕಸೂತಿ ಕಲೆ (ಬೆಳಗಾವಿಯ ಶಾರದಮ್ಮ), ಕುಂಬಾರಿಕೆ ಕಲೆ (ಗೀತಾ ಮತ್ತು ಭಾಗ್ಯ), ಇನ್ಲೆ (ಮೋಹನ್), ಚರಕ ಹಾಗೂ ಕೈಮಗ್ಗ (ಸಚ್ಚಿ), ಬಿದಿರಿನಿಂದ ತಯಾರಿಸುವ ಬೆತ್ತ, ಬುಟ್ಟಿ ಹೆಣಿಗೆ (ಕೆ.ಆರ್.ಪೇಟೆಯ ಮರಿಯಮ್ಮ), ಚನ್ನಪಟ್ಟಣ ಗೊಂಬೆ ತಯಾರಿಕೆ (ಶಾಲಿನಿ), ವರ್ಲಿ ಹಾಗೂ ಮದರಂಗಿ ಕಲೆ (ಮಂಡ್ಯದ ಅಭಿಷೇಕ್), ಸೂಕ್ಷ್ಮಕಲೆ-ಚರ್ಮ ಮತ್ತು ಹುಲ್ಲಿನ ಕೌಶಲ (ಗದಗದ ದವಲಪ್ಪ) ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

15 ಚಿತ್ರಕಲಾವಿದರು ಭಾಗಿ:
ಸೆ. 23ರಿಂದ 25ರವರೆಗೆ ದಸರಾ ಚಿತ್ರಕಲಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಬಾಗಲಕೋಟೆಯ ಕೃಷ್ಣಾ ಝಿಂಗಾಡೆ, ವಿಜಯಪುರದ ಗಂಗಾಧರ ಮಾಯಾಚಾರಿ, ಬೆಂಗಳೂರು ಗ್ರಾಮಾಂತರದ ದೀಪಕ್‌ಕುಮಾರ್, ತುಮಕೂರಿನ ಹರ್ಷ, ಬೆಂಗಳೂರಿನ ಮಂಜುನಾಥ ವಾಲಿ, ದಾವಣಗೆರೆಯ ಅಚ್ಚುತಾನಂದ, ಬೆಂಗಳೂರಿನ ಲೋಕೇಶ್, ವೀಣಾಗೌಡ, ಮೈಸೂರಿನ ಎಚ್.ಶಿವಕುಮಾರ್, ನಾಗಶಯನ, ಎನ್.ರಶ್ಮಿ, ಮಂಗಳೂರಿನ ಜಯಶ್ರೀ, ಬೀದರ್‌ನ ಸಂತೋಷ್, ಚಾಮರಾಜನಗರದ ನಾಗರಾಜು, ಮಂಡ್ಯದ ಶಿವಣ್ಣ ಭಾಗವಹಿಸಲಿದ್ದಾರೆ.
ಇಷ್ಟು ಕಲಾವಿದರೂ ಮೂರು ದಿನಗಳವರೆಗೆ ತಲಾ ಎರಡರಂತೆ ಒಟ್ಟು 30 ಚಿತ್ರಗಳನ್ನು ರಚಿಸಲಿದ್ದಾರೆ. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಹಾಗೂ ಪ್ರಕೃತಿ ವರ್ಣಚಿತ್ರಗಳನ್ನು ಬಿಡಿಸಲಿದ್ದಾರೆ. ಉತ್ತಮ ಮೂರು ಚಿತ್ರಗಳಿಗೆ ಹಾಗೂ ಮೂರು ಮರದ ಕಲಾಕೃತಿಗಳಿಗೆ ಉಪ ಸಮಿತಿ ವತಿಯಿಂದ ನಗದು ಬಹುಮಾನ ಕೂಡ ದೊರೆಯಲಿದೆ. ಬಳಿಕ ಎಲ್ಲ ಚಿತ್ರಗಳನ್ನು ದಸರಾ ಮುಗಿಯುವವರೆಗೂ ಕಲಾಮಂದಿರ ಆವರಣದಲ್ಲಿ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ ಎನ್ನುತ್ತಾರೆ ವಿ.ಎನ್.ಮಲ್ಲಿಕಾರ್ಜುನಸ್ವಾಮಿ.

ಸೆ. 16ರಿಂದ 25ರವರೆಗೆ ಕಲಾಮಂದಿರದ ಆವರಣದಲ್ಲಿ ‘ಶಿಲ್ಪಕಲಾ ಶಿಬಿರ’ ಆಯೋಜಿಸಲಾಗಿದೆ. ಶಿಬಿರದಲ್ಲಿ ಹತ್ತು ಕಲಾವಿದರು ಭಾಗಿಯಾಗಲಿದ್ದಾರೆ. ಸೆ. 23ರಿಂದ 25ರವರೆಗೆ ದಸರಾ ಚಿತ್ರಕಲಾ ಶಿಬಿರ ಆಯೋಜಿಸಿದ್ದು, 15 ಚಿತ್ರಕಲಾವಿದರು ಭಾಗವಹಿಸಲಿದ್ದಾರೆ. ಈ ಎಲ್ಲ ಕಲಾವಿದರ ಕಲಾಕೃತಿಗಳನ್ನು ಸೆ. 26ರಿಂದ ಅ. 3ರವರೆಗೆ ಕಲಾಮಂದಿರದ ಆವರಣದಲ್ಲಿ ಪ್ರದರ್ಶನ ಮಾಡಲಾಗುತ್ತದೆ.ವಿಜಯಕುಮಾರ್, ಉಪ ವಿಶೇಷಾಧಿಕಾರಿ, ದಸರಾ ಲಲಿತಕಲೆ ಹಾಗೂ ಕರಕುಶಲ ಉಪ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net