ಕರಾವಳಿಯಲ್ಲಿ ಕಲರ್​ ಕೋಡ್​ ಕನವರಿಕೆ

UDP-23-1-Auto (1)
Published on

| ಉಡುಪಿಯಲ್ಲಿ ಆಟೋ ಚಾಲಕರ ಬಾಡಿಗೆಗೆ ಆವೇಶ

| ಆರು ತಿಂಗಳಾದರೂ ಪಾಲನೆಯಾಗಿಲ್ಲ ಡಿಸಿ ಆದೇಶ

ಪ್ರಶಾಂತ ಭಾಗ್ವತ, ಉಡುಪಿ
ಆಟೋದಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಥ್ರಿಲ್​. ಇನ್ನು ಪ್ರಯಾಣದ ತುರ್ತು ಸಂದರ್ಭ ಇದ್ದಾಗಲಂತೂ ಮತ್ತದೇ ಆಟೋ ವರದಾನವಾಗಿರುತ್ತದೆ. ಇತ್ತೀಚೆಗಂತೂ ಗ್ರಾಮೀಣ ಭಾಗದವರ ಪಾಲಿಗಂತೂ ಈ ವಾಹನ ಐರಾವತಕ್ಕೆ ಸಮ.

ಆಟೋ ಕುರಿತು ಈ ಪೀಠಿಕೆ ಇಡಲು ಕಾರಣವಿದೆ. ಹಳ್ಳಿಯೂ ಸೇರಿದಂತೆ ನಗರ ಪ್ರದೇಶಗಳಲ್ಲಿ ಆಟೋ ಸೇವೆ ಹಾಗೂ ಚಾಲಕರ ಸಹಕಾರ ಮನೋಭಾವಕ್ಕೆ ಎಳ್ಳಿನಷ್ಟೂ ಕೊತೆಯಿಲ್ಲ. ಆದರೆ, ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಬಾಡಿಗೆ ಹಾಗೂ ಆಟೋ ನಿಲ್ದಾಣದಲ್ಲಿ ನಿಲ್ಲುವ ವಿಚಾರವಾಗಿ ಚಾಲಕ-ಮಾಲೀಕರ ನಡುವೆ ಜಟಾಪಟಿ ನಡೆಯುತ್ತಿದೆ. ಪರಸ್ಪರ ಹಲ್ಲೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.

Auto Driver

ಜಿಲ್ಲಾಡಳಿತದಿಂದ ಸಭೆ

ಆಟೋ ಚಾಲಕ-ಮಾಲೀಕರ ಸಂಘಟನೆಗಳ ಬಾಡಿಗೆ ಹಾಗೂ ವಲಯ ವ್ಯಾಪ್ತಿಗೆ ಸಂಬಂಧಿಸಿದ ಗಲಾಟೆ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಸಮಸ್ಯೆ ನಿವಾರಣೆ ಹಿನ್ನೆಲೆಯಲ್ಲಿ ಎಲ್ಲ ಆಟೋಗಳಿಗೂ ಕಲರ್​ ಕೋಡ್​ ಕಡ್ಡಾಯಗೊಳಿಸಿ ಡಿಸಿ ಆದೇಶಿಸಿದ್ದರು.

UDP-23-1B-Auto (1)

ಪ್ರತಿನಿತ್ಯ ನಿಲ್ದಾಣಕ್ಕಾಗಿ ಕಚ್ಚಾಟ

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಉಡುಪಿ ತಾಲೂಕು ಒಂದೇ ಇತ್ತು. 2018ರಿಂದ ಬ್ರಹ್ಮಾವರ ತಾಲೂಕು, ಕಾಪು ತಾಲೂಕು ರಚನೆಯಾಗಿದೆ. ಇದೀಗ ಈ ಎರಡೂ ತಾಲೂಕಿನ ವಲಯ-1 ಪರವಾನಗಿ ಹೊಂದಿರುವ ಆಟೋಗಳೂ ಉಡುಪಿ ನಗರದಲ್ಲಿ ಸಂಚರಿಸುತ್ತಿದೆ. ಇದರಿಂದ ಪ್ರತಿನಿತ್ಯ ಆಟೋ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಚಾಲಕರ ನಡುವೆಯೇ ಘರ್ಷಣೆ, ಗಲಾಟೆ ಆಗುತ್ತಿದೆ. ನಗರ ಠಾಣೆ, ಸಂಚಾರ ಠಾಣೆ ಮತ್ತು ನ್ಯಾಯಾಲಯದಲ್ಲಿಯೂ ಹಲವು ಪ್ರಕರಣ ದಾಖಲಾಗಿದೆ. ನಗರದಲ್ಲಿ ಅನೇಕ ಅನಧಿಕೃತ ನಿಲ್ದಾಣವೂ ಆರಂಭಗೊಳ್ಳುತ್ತಿದೆ.

ಆರ್​ಟಿಒಗೆ ಮನವಿ

ಪ್ರತಿದಿನವೂ ಆಟೋ ಚಾಲಕರ ನಡುವೆಯೇ ಹಲ್ಲೆ, ಗಲಾಟೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆ.21ರಂದು ಉಡುಪಿ ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್​ (ರಿ.) ಹಾಗೂ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆ, ಉಡುಪಿ ವತಿಯಿಂದ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್​ಟಿಒ)ಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಉಡುಪಿ, ಕಾಪು ಹಾಗೂ ಬ್ರಹ್ಮಾವರದ ಎಲ್ಲ ಆಟೋಗಳಿಗೆ ಕಲರ್​ ಕೋಡ್​ ಅಳವಡಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

Auto Memorendom
ಕಲರ್​ ಕೋಡ್​ ಅಳವಡಿಸುವಂತೆ ಒತ್ತಾಯಿಸಿ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಆಟೋ ಚಾಲಕರು ಮನವಿ ಸಲ್ಲಿಸುತ್ತಿರುವುದು.

ಪ್ರತಿಭಟಿಸುವ ಎಚ್ಚರಿಕೆ

ಉಡುಪಿ ಸಾರಿಗೆ ಅಧಿಕಾರಿಗಳು ಈ ಮನವಿ ವಿಚಾರವಾಗಿ ಡಿಸಿ ಹಾಗೂ ಎಸ್ಪಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತ್ವರಿತವಾಗಿ ಎಲ್ಲ ಆಟೋಗಳಿಗೆ ಕಲರ್​ ಕೋಡ್​ ಅಳವಡಿಸದಿದ್ದರೆ ಪ್ರತಿಭಟಿಸಬೇಕಾಗುತ್ತದೆ ಎಂದು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆ ವಲಯ-1ರ ಸಿಟಿ ಪರ್ಮಿಟ್​ ಯೂನಿಯನ್​ ಅಧ್ಯಕ್ಷ ಬಿ.ಚೆನ್ನಕೇಶವ ಭಟ್​ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ನಿಲ್ದಾಣದಲ್ಲಿ ನಿಲ್ಲಲು ಹೈಕೋರ್ಟ್​ ಅನುಮತಿ

ಆಯಾ ವ್ಯಾಪ್ತಿಯಲ್ಲಿರುವ ಯಾವುದೇ ನಿಲ್ದಾಣದಲ್ಲಿ ಬಾಡಿಗೆ ಬಂದಿರುವ ಅನ್ಯ ನಿಲ್ದಾಣದ ಆಟೋ ನಿಲ್ಲಬಹುದು ಎಂದು 2020ರಲ್ಲಿ ಹೈಕೋರ್ಟ್​ ಆದೇಶ ನೀಡಿದೆ. ಆದರೆ, ಜಿಲ್ಲೆಯ ಆಟೋ ನಿಲ್ದಾಣಗಳಲ್ಲಿ ಅನ್ಯ ನಿಲ್ದಾಣದ ಆಟೋಗಳಿಗೆ ನಿಲ್ಲಲು ಅವಕಾಶ ಮಾಡಿಕೊಳ್ಳುತ್ತಿಲ್ಲ. ಇದುವೇ ಚಾಲಕ-ಮಾಲೀಕರ ನಡುವೆ ಗಲಾಟೆ ಉಂಟಾಗಲು ಮೂಲ ಕಾರಣವಾಗಿದೆ. ಕೆಲವೊಂದು ನಿಲ್ದಾಣದಲ್ಲಿ 30ರಿಂದ 50 ಸಾವಿರ ರೂ.ವರೆಗೆ ಸದಸ್ಯತ್ವ ಶುಲ್ಕ ಪಡೆದುಕೊಂಡು ಅಲ್ಲಿ ಅವರಿಗೆ ಮಾತ್ರ ಆಟೋ ನಿಲ್ಲಿಸಲು ಅವಕಾಶ ಕೊಡುತ್ತಾರೆ ಎನ್ನುವುದು ಕೆಲ ಆಟೋ ಚಾಲಕರ ಆರೋಪವಾಗಿದೆ.

ಕಲರ್​ ಕೋಡ್​ ಅಳವಡಿಸುವಂತೆ ಉಡುಪಿ ಡಿಸಿ ಆದೇಶಿಸಿ 6 ತಿಂಗಳಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕಿನ ಆಟೋಗಳಿಗೆ ಕೂಡಲೇ ಪ್ರತ್ಯೇಕ ಕಲರ್​ ಕೋಡ್​ ಅಳವಡಿಸಿ, ತಲೆದೋರಿರುವ ಸಮಸ್ಯೆ ನೀಗಿಸಿ ಜೀವನ ಸಾಗಿಸಲು ಚಾಲಕರಿಗೆ ಸಹಕರಿಸಬೇಕು. | ಶಿವಾನಂದ ಮೂಡುಬೆಟ್ಟು.ಪ್ರ.ಕಾರ್ಯದರ್ಶಿ. ಉಡುಪಿ ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್​ (ರಿ.)

ಈ ಹಿಂದೆ ಜಿಲ್ಲಾಡಳಿತ ನಡೆಸಿದ್ದ ಆಟೋ ಚಾಲಕರ ಸಭೆಯಲ್ಲಿ ನಿರ್ಧರಿಸಿದಂತೆ ಕಲರ್​ ಕೋಡ್​ ಕಡ್ಡಾಯ ಮಾಡಲಾಗಿದೆ. ಚಾಲಕ-ಮಾಲೀಕರೇ ಸ್ವಯಂಪ್ರೇರಣೆಯಿಂದ ಕಲರ್​ ಕೋಡ್​ ಅಳವಡಿಸಿಕೊಳ್ಳಬೇಕು. ಆಡಳಿತಾತ್ಮಕವಾಗಿ ಆ ಕಾರ್ಯ ಆಗಬೇಕೆಂದರೆ ಕಾಲಾವಕಾಶ ಬೇಕಾಗುತ್ತದೆ. ಎಲ್ಲ ಆಟೋದವರೂ ಹೊಂದಿಕೊಂಡು ಉತ್ತಮ ಸೇವೆಗೆ ಆದ್ಯತೆ ನೀಡುವಂತಾಗಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

ಜಿಲ್ಲೆಯಲ್ಲಿ ಒಟ್ಟು 26,272 ಆಟೋಗಳಿವೆ. ಉಡುಪಿ ವಲಯ 1ರಲ್ಲಿ ನಗರಸಭೆ ವ್ಯಾಪ್ತಿ(7 ಕಿ.ಮೀ.)ಯಲ್ಲಿ ಯೆಲ್ಲೋ ಕಲರ್​ ಸ್ಟಿಕರ್​ನ 3,500 ಆಟೋ ಇದೆ. ವಲಯ&2ರಲ್ಲಿ ಗ್ರೀನ್​ ಕಲರ್​ ಸ್ಟಿಕರ್​ನ 3,600 ಆಟೋ ಇದೆ. ಇವರು ನಗರಸಭೆ ವ್ಯಾಪ್ತಿಗೆ ಬರುವಂತಿಲ್ಲ. ರಹದಾರಿ ಉಲ್ಲಂಘಿಸಿದರೆ 5 ಸಾವಿರ ರೂ. ದಂಡವಿದೆ. ಪ್ರಸಕ್ತ ವರ್ಷ 21 ಪ್ರಕರಣ ದಾಖಲಾಗಿದೆ. | ಎಲ್​.ಪಿ. ನಾಯಕ್​. ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ.

ನಗರದ ಆಟೋಗಳಿಗಾಗಿ ನಗರಸಭೆಯವರು ಪ್ರತ್ಯೇಕ ನಿಯಮ ರೂಪಿಸಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ ನೋಂದಣಿಯೊಂದಿಗೆ ಅಧಿಕೃತ ನಿಲ್ದಾಣ ನಿರ್ಮಿಸಬೇಕು. ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಆಟೋಗಳ ಸಂಖ್ಯೆ ಇದೆಯೇ ಎನ್ನುವುದನ್ನು ಗಮನಿಸಿ, ಅಗತ್ಯತೆಗಿಂತ ಹೆಚ್ಚಿದ್ದಲ್ಲಿ ಹೊಸ ಪರ್ಮಿಟ್​ ನೀಡಬಾರದು. | ಯಶ್​ಪಾಲ್​ ಸುವರ್ಣ. ಶಾಸಕ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net