

ಮೈಸೂರು: ನಗರದ ಊಟಿ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣದ ಗೋಪುರ ‘ಗುಂಬಜ್’ ಮಾದರಿಯಲ್ಲಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗೋಪುರದ ಬಣ್ಣವನ್ನು ರಾತ್ರೋ ರಾತ್ರಿ ಬದಲಾಯಿಸಲಾಗಿದೆ. ಈ ಹಿಂದೆ ಈ ಗೋಪುರ ಚಿನ್ನದ ಬಣ್ಣದಿಂದ ಕೂಡಿತ್ತು, ಇದೀಗ ಕೆಂಪು ಬಣ್ಣ ಬಳಿಯುವ ಮೂಲಕ ಮೈಸೂರು ಅರಮನೆಯ ಗೋಪುರವನ್ನು ಹೋಲುವ ರೀತಿಯಲ್ಲಿ ಮಾಡಲಾಗಿದೆ.
ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಒಟ್ಟು ಮೂರು ಗೋಪುರಗಳನ್ನು ನಿರ್ಮಾಣ ಮಾಡಲಾಗಿದ್ದು, ಮೂರು ಗೋಪುರಗಳಿಗೆ ಚಿನ್ನದ ಬಣ್ಣ ಬಳಿಯಲಾಗಿತ್ತು. ವಿವಾದದ ನಂತರ ಒಂದು ಗೋಪುರಕ್ಕೆ ಕೆಂಪು ಬಣ್ಣ ಬಳಿಯಲಾಗಿತ್ತು. ಬುಧವಾರ ರಾತ್ರಿ ಉಳಿದ ಎರಡು ಗೋಪುರಗಳಿಗೂ ಕೆಂಪು ಬಣ್ಣವನ್ನು ಬಳಿಯಲಾಗಿದೆ. ಇದೇ ರೀತಿ ರಾತ್ರೋ ರಾತ್ರಿ ‘ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣ’ ಎಂಬ ನಾಮಫಲಕವನ್ನು ಅಳವಡಿಸಲಾಗಿತ್ತು.
ಗಡುವು ಅಂತ್ಯ: ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಗುಂಬಜ್ ಮಾದರಿಯ ಗೋಪುರವನ್ನು ನಾಲ್ಕು ದಿನಗಳ ಒಳಗೆ ತೆರವುಗೊಳಿಸಬೇಕು. ಇಲ್ಲವಾ ದಲ್ಲಿ ನಾನೇ ಜೆಸಿಬಿ ತೆಗೆದುಕೊಂಡು ಹೋಗಿ ಗುಂಬಜ್‌ಅನ್ನು ಒಡೆದು ಹಾಕುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದರು. ಅವರು ನೀಡಿದ್ದ ನಾಲ್ಕು ದಿನದ ಗಡುವು ಗುರುವಾರಕ್ಕೆ ಅಂತ್ಯಗೊಂಡಿದ್ದು, ಮುಂದೆ ಅವರು ಯಾವ ರೀತಿಯ ಹೆಜ್ಜೆ ಇರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕಾವಲು ಕಾಯುತ್ತಿರುವ ಪೊಲೀಸರು: ಬಸ್ ನಿಲ್ದಾಣದ ವಿನ್ಯಾಸದ ಕುರಿತು ಸಾಕಷ್ಟು ಆಕ್ರೋಶಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಗಳು ನಡೆಯಬಾರದು ಎಂಬ ಉದ್ದೇಶದಿಂದ ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ರಾತ್ರಿ ವೇಳೆಯೂ ಈ ನಿಲ್ದಾಣದ ಭದ್ರತೆಗೆ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಜನರು ಈ ನಿಲ್ದಾಣವನ್ನು ನೋಡುವ ಸಲುವಾಗಿಯೇ ಊಟಿ ರಸ್ತೆಗೆ ಆಗಮಿಸುತ್ತಿದ್ದಾರೆ.
ಸಿಎಂ ಗಮನ ಸೆಳೆದ ರಾಮದಾಸ್: ಸಂಸದ ಪ್ರತಾಪ್ ಸಿಂಹ ಹಾಗೂ ಹಿಂದುಪರ ಸಂಘಟನೆಗಳು ಬಸ್ ನಿಲ್ದಾಣದ ವಿನ್ಯಾಸದ ಕುರಿತು ಆಕ್ರೋಶ ಹೊರ ಹಾಕುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಬುಧವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
‘ಮೈಸೂರು ಪಾರಂಪರಿಕ ನಗರಿಯಾಗಿದ್ದು, ನಗರದಲ್ಲಿ ನಿರ್ಮಾಣಗೊಳ್ಳುವ ಕಟ್ಟಡಗಳು ಪಾರಂಪರಿಕ ಶೈಲಿಯಲ್ಲಿ ಇರಲಿ ಎಂಬ ಉದ್ದೇಶದಿಂದ ಬಸ್ ನಿಲ್ದಾಣದ ಮೇಲೆ ಮೈಸೂರು ಅರಮನೆಯ ಗೋಪುರವನ್ನು ಹೋಲುವ ರೀತಿಯ ಗೋಪುರ ನಿರ್ಮಾಣ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಮದಾಸ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚನೆ ಮಾಡಿ, ಸಮಿತಿ ನೀಡುವ ವರದಿಗೆ ಬದ್ಧನಾಗಿರುತ್ತೇನೆ ಎಂದು ರಾಮದಾಸ್ ಹೇಳಿದ್ದಾರೆ.