

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಹಲ್ಲೇಗೆರೆ, ತುಂಬಕೆರೆ ಹಾಗೂ ದೊಡ್ಡಬಾಣಸವಾಡಿ ಗ್ರಾಮದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.
ಹಲ್ಲೇಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ 50 ಲಕ್ಷ ರೂ, ತುಂಬಕೆರೆ ಹಾಗೂ ದೊಡ್ಡಬಾಣಸವಾಡಿ ಗ್ರಾಮದಲ್ಲಿ ತಲಾ 25 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ದೊಡ್ಡಬಾಣಸವಾಡಿ ಗ್ರಾಮದ ಗದ್ದೆ ಬಯಲು ಹಾಗೂ ಸೇತುವೆ ಕಾಮಗಾರಿಗೆ 5 ಕೋಟಿ ರೂ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಕೆಲಸ ಪ್ರಾರಂಭವಾಗಬಹುದು. ಅಂತೆಯೇ ಚಿಕ್ಕಬಾಣಸವಾಡಿಯಿಂದ ದೊಡ್ಡ ಬಾಣಸವಾಡಿಗೆ ಬರುವ ರಸ್ತೆಯನ್ನು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ದೊಡ್ಡ ಬಾಣಸವಾಡಿ ಮುಖ್ಯರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ ಅನುದಾನ ನೀಡಲಾಗಿದೆ. ಒಟ್ಟಾರೆ ಏಳು ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು. 5 ಕೋಟಿ ರೂ ವೆಚ್ಚದಲ್ಲಿ ಈಚಗೆರೆಯಿಂದ ಡಣಾಯಕನಪುರಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಟೆಂಡರ್ ಮುಗಿದಿದೆ. ಇನ್ನು ಹೊಡಾಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 40 ಕೋಟಿ ರೂ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ದ್ಯಾಪಸಂದ್ರ ಉಮೇಶ್, ಜಯರಾಂ, ಪ್ರಶಾಂತ್, ಬೋರಪ್ಪ, ಕರೀಗೌಡ, ಹಲ್ಲೇಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್, ಮಣಿ, ದೊಡ್ಡಬಾಣಸವಾಡಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ್, ಸೊಸೈಟಿ ಅಧ್ಯಕ್ಷ ಹರೀಶ್, ಪೃಥ್ವಿರಾಜ್, ಮನುಕುಮಾರ್, ನಾಗರಾಜ್, ಗುರುರಾಜ್, ಪಿಡಿಒ ಕೋಮಲಾ ಇತರರಿದ್ದರು.
ಪಿಕಪ್ ನಾಲೆ ಪರಿಶೀಲನೆ
ನೂರಾರು ಎಕರೆ ಜಮೀನಿಗೆ ನೀರು ಸರಾಗವಾಗಿ ಹರಿಯುವ ಉದ್ದೇಶದಿಂದ ಕಚ್ಚಿಗೆರೆ ಹಾಗೂ ಹನಕೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಮೂರು ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಪಿಕಪ್ ನಾಲೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ರವಿಕುಮಾರ್ ಗಣಿಗ ಪರಿಶೀಲನೆ ನಡೆಸಿದರು. ಜತೆಗೆ ಕಾಮಗಾರಿಯಿಂದಾಗುತ್ತಿರುವ ಅನುಕೂಲದ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಇದಕ್ಕೆ ಮೆಚ್ಚುಗೆ ಮಾತುಗಳನ್ನಾಡಿದ ರೈತರು, ಮೊದಲು ನೀರು ಹರಿಯದೇ ಸಮಸ್ಯೆಯಾಗುತ್ತಿತ್ತು. ಆದರೀಗ ನೂರಾರು ಎಕರೆ ಜಮೀನಿಗೆ ನೀರು ಹರಿಯುತ್ತಿದೆ. ಇದರಿಂದ ನಮಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಶ್ಲಾಘಿಸಿದರು.