ಟ್ರ್ಯಾಕ್ಟರ್​ಗೆ ಡಿಕ್ಕಿ, ಒಬ್ಬರು ಸಾವು ಪ್ರಕರಣ, ಅಪರಾಧಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ

udp-8-court
Published on

ಸವಣೂರ: ಅತಿವೇಗದಿಂದ ವಾಹನ ಚಲಾಯಿಸಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು, ಒಬ್ಬರ ಸಾವಿಗೆ ಕಾರಣನಾದ ಚಾಲಕನಿಗೆ ಇಲ್ಲಿನ ಸಿಜೆ ಮತ್ತು ಜೆಎಂಎಫ್​ಸಿ ನ್ಯಾಯಾಲಯವು 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಅಸ್ಲಾಮ ಖಾದರಖಾನ ಪಠಾಣ ಶಿಕ್ಷೆಗೊಳಗಾದ ಅಪರಾಧಿ.

ಸವಣೂರ- ಕಾರಡಗಿ ರಸ್ತೆಯಲ್ಲಿ 2016ರ ಆ. 4ರಂದು ಪ್ರಕರಣ ನಡೆದಿದ್ದು, ಅಪಘಾತದಲ್ಲಿ ಟ್ರ್ಯಾಕ್ಟರ್​ನಲ್ಲಿದ್ದ ನಿಂಗವ್ವ ವೀರಭದ್ರಗೌಡ ಪಾಟೀಲ ಸಾ.ಬೀರವಳ್ಳಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಸವಣೂರ ಠಾಣೆ ತನಿಖಾಧಿಕಾರಿ ಎಂ.ಎಂ. ನದಾಫ್ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೇಯಾಂಶ ದೊಡ್ಡಮನಿ ಅವರು ಆರೋಪ ಸಾಬೀತಾದ ಕಾರಣ ಅಸ್ಲಾಮ ಖಾದರಖಾನ ಪಠಾಣಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ಹಾಗೂ ಮುಜಾಹಿದ್ ಖಾದರಖಾನ್ ಪಠಾಣಗೆ 1 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಫ್.ಎಂ. ಹಾದಿಮನಿ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net