

ಮಡಿಕೇರಿ: ಯುವಕನೋರ್ವ ಟ್ರ್ಯಾಕ್ಟರ್ ಚಲಾಯಿಸಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಡಿಕ್ಕಿ ಪಡಿಸಿ ಜಖಂಗೊಳಿಸಿದ ಘಟನೆ ನಗರದ ಮಹದೇವಪೇಟೆಯಲ್ಲಿ ಶನಿವಾರ ನಡೆದಿದೆ.
ನಗರದ ಮಹದೇವಪೇಟೆಯ ಏಕಮುಖ ರಸ್ತೆಯಲ್ಲಿ ಮೊದಲು ಸಂಚರಿಸಿದ್ದಾನೆ. ಈ ಸಂದರ್ಭ ಸ್ಥಳೀಯ ನಿವಾಸಿಗಳು ಗದರಿಸಿ ಕಳುಹಿಸಿದ್ದಾರೆ. ನಂತರ ವಾಹನ ತಿರುಗಿಸಿ ಇಂದಿರಗಾಂಧಿ ವೃತ್ತದ ಕಡೆಗೆ ಸಂಚರಿಸುವ ಸಂದರ್ಭದಲ್ಲಿ ಮಾರುಕಟ್ಟೆ ಸಮೀಪ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಡಿಕ್ಕಿ ಪಡಿಸಿಕೊಂಡು ಬಂದಿದ್ದಾನೆ. ಪರಿಣಾಮ ಕಾರು, ಆಟೋ, ಜೀಪ್ ಸೇರಿದಂತೆ ೧೦ಕ್ಕೂ ಅಧಿಕ ವಾಹನಗಳು ಜಖಂಗೊಂಡಿದೆ. ಪರಿಣಾಮ ಕುಪಿತಗೊಂಡ ಸ್ಥಳೀಯರು, ವಾಹನ ಮಾಲೀಕರು ಥಳಿಸಿದ್ದಾರೆ.
ಘಟನಾ ಸಂಬಂಧ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.