ಗಿರಿಜನ ಪದವಿ ಪೂರ್ವ ಕಾಲೇಜು ಮುಚ್ಚಬೇಡಿ

23 yelandur 02
Published on

ಯಳಂದೂರು : ತಾಲೂಕಿನ ಉಪ್ಪಿನಮೋಳೆ ಗ್ರಾಮದ ಬಳಿ ಇರುವ ವಿವೇಕಾನಂದ ಗಿರಿಜನ ಪದವಿ ಪೂರ್ವ ಕಾಲೇಜನ್ನು ಏಕಾಏಕಿ ಮುಚ್ಚಲು ಮುಂದಾಗಿರುವ ಆಡಳಿತ ಮಂಡಳಿಯ ನಡೆಯನ್ನು ಖಂಡಿಸಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಉಪನ್ಯಾಸಕರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಈ ಕಾಲೇಜಿನಲ್ಲಿ ಪ್ರಸ್ತುತ 42 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಗಿರಿಜನ, ಸೋಲಿಗ ವಿದ್ಯಾರ್ಥಿಗಳೂ ಇದ್ದಾರೆ. ಬಿಳಿಗಿರಿರಂಗನಬೆಟ್ಟದಲ್ಲಿ 1995 ರಲ್ಲಿ ಪಿಯುಸಿ ಕಲಾ ವಿಭಾಗದ ಶಿಕ್ಷಣಕ್ಕಾಗಿ ಆರಂಭಗೊಂಡ ಈ ಕಾಲೇಜು ನಂತರ ಉಪ್ಪಿನಮೋಳೆ ಗ್ರಾಮದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈಗ ಏಕಾಏಕಿ ಖಾಸಗಿ ಆಡಳಿತ ಮಂಡಳಿಯವರು ಕಾಲೇಜನ್ನು ಮುಚ್ಚಲು ತೀರ್ಮಾನಿಸಿರುವುದರಿಂದ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಕಾಲೇಜಿನ ಹಿರಿಯ ಉಪನ್ಯಾಸಕ ದೊಡ್ಡಸುಬ್ಬಯ್ಯ ಮಾತನಾಡಿ, ಈ ಕಾಲೇಜಿನಲ್ಲಿ ನಾನು 29 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದೇನೆ. ಈಗ ನಿವೃತ್ತಿ ಹಂತದಲ್ಲಿದ್ದೇನೆ. ಅತ್ಯಂತ ಕಡಿಮೆ ಸಂಬಳದಲ್ಲಿ ನಾನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸೇವಾ ಮನೋಭಾವನೆಯಿಂದ ನಾವು ಇಲ್ಲಿ ದುಡಿಯುತ್ತಿದ್ದೇವೆ. ಆದರೆ ಏಕಾಏಕಿ ಕಾಲೇಜು ಮುಚ್ಚುವ ನಿರ್ಧಾರ ಮಾಡಿರುವುದು ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪ ಒಡ್ಡಿ ಆಡಳಿತ ಮಂಡಳಿ ಕಾಲೇಜು ಮುಚ್ಚಲು ಮುಂದಾಗಿದೆ. ಆದರೆ ಸೇವಾ ಮನೋಭಾವನೆಯಿಂದ ಈ ಕಾಲೇಜು ಆರಂಭಿಸಲಾಗಿದೆ. 30 ವಿದ್ಯಾರ್ಥಿಗಳಿದ್ದರೂ ಪರೀಕ್ಷೆ ಬರೆಯಲು ಮಾನ್ಯತೆ ನೀಡಲಾಗುತ್ತದೆ. ಆದರೆ ಇದರಿಂದ ಆದಾಯದ ನಿರೀಕ್ಷೆಯಲ್ಲಿ ಆಡಳಿತ ಮಂಡಳಿ ಕಾಲೇಜು ಮುಚ್ಚುವ ಕ್ರಮಕ್ಕೆ ಮುಂದಾಗಿರುವುದು ಸೂಕ್ತವಲ್ಲ. ಈ ಬಗ್ಗೆ ಮರು ಪರಿಶೀಲನೆ ನಡೆಸಿ ಕಾಲೇಜನ್ನು ಮುಂದುವರಿಸಬೇಕು ಎಂದು ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ಉಪನ್ಯಾಸಕ ದೊಡ್ಡಸುಬ್ಬಯ್ಯ ಆಗ್ರಹಿಸಿದರು.
ಪಾಲಕ ಮಹದೇವಶೆಟ್ಟಿ ಮಾತನಾಡಿ, ವಿಜಿಕೆಕೆ ಕೇಂದ್ರ ಸೇವಾ ಮನೋಭಾವನೆಯಿಂದ ತೆರೆಯಲಾಗಿದೆ. ಈ ಭಾಗದಲ್ಲಿ ಗಿರಿಜನರು, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚಾಗಿದ್ದಾರೆ. ಆದರೆ ಈಗ ಏಕಾಏಕಿ ಕಾಲೇಜು ಮುಚ್ಚುವ ನಿರ್ಣಯ ಕೈಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net