ಕಾಲೇಜುಗಳು ಉದ್ಯೋಗ ನೀಡುವ ಕೇಂದ್ರಗಳಾಗಲಿ

IMG20250125212902.jpg
Published on

ಬೆಳಗಾವಿ: ಪದವಿ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಪದವಿ ಕೊನೆ ವರ್ಷದಲ್ಲಿಯೇ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಉದ್ಯೋಗ ಕೋಶಗಳು ಕಾರ್ಯ ನಿರ್ವಹಿಸಬೇಕು. ಕಾಲೇಜುಗಳು ಪದವಿ ಶಿಕ್ಷಣದ ಜತೆಗೆ ಉದ್ಯೋಗ ನೀಡುವ ಕೇಂದ್ರಗಳಾಗಬೇಕು ಎಂದು ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.

ರಾಣಿ ಚನ್ನಮ್ಮ ವಿವಿಯ ಕುವೆಂಪು ಸಭಾಭವನದಲ್ಲಿ ಶನಿವಾರ ಪಿಎಂ ಉಷಾ ಮೇರು ಸ್ಕೀಮ್ ಮತ್ತು ಉದ್ಯೋಗ ಕೋಶದಿಂದ ಜರುಗಿದ ಒಂದು ದಿನದ ಸಭೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜು ಮತ್ತು ವಿವಿಗಳಲ್ಲಿನ ಉದ್ಯೋಗ ಕೋಶದ ಸಿಬ್ಬಂದಿ ಸಕ್ರಿಯತೆಯು ಅನೇಕ ವಿದ್ಯಾರ್ಥಿಗಳಿಗೆ ಬಾಳಿಗೆ ಬೆಳಕಾಗುವ ಸಾಧ್ಯತೆಯಿದೆ. ಇಂದಿನ ವಿದ್ಯಾರ್ಥಿ ನಾಳೆಯ ಉದ್ಯೋಗಿ ಎಂಬ ಪರಿಕಲ್ಪನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಕೌಶಲ ವೃದ್ಧಿಗೆ ಅವಶ್ಯವಿರುವ ತರಬೇತಿ ಕಾರ್ಯಕ್ರಮಗಳನ್ನು ಉದ್ಯೋಗ ಕೋಶವು ಆಯೋಜಿಸುವುದರತ್ತ ಗಮನ ನೀಡಬೇಕು ಎಂದರು.

ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.

ಹುಬ್ಬಳ್ಳಿಯ ದೇಶಪಾಂಡೆ ೌಂಡೇಷನ್ ನಿರ್ದೇಶಕ ರವಿ ಚವ್ಹಾಣ ಮಾತನಾಡಿದರು. ಇದೇ ವೇಳೆ ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಮತ್ತು ರಾಣಿ ಚನ್ನಮ್ಮ ವಿವಿ ನಡುವೆ ಕೌಶಲ ಅಭಿವೃದ್ಧಿ ಮತ್ತು ಶೈಕ್ಷಣಿಕ ಒಡಂಬಡಿಕೆ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.

ವಿವಿಯ ಹಣಕಾಸು ಅಧಿಕಾರಿ ಎಂ.ಎಸ್. ಸ್ವಪ್ನಾ, ಪಿಎಂ ಉಷಾ ನೊಡಲ್ ಅಧಿಕಾರಿ ಪ್ರೊ. ಬಾಲಚಂದ್ರ ಹೆಗಡೆ, ಉದ್ಯೋಗ ಕೋಶದ ಸಂಯೋಜಕ ಡಾ. ಕಿರಣಕುಮಾರ, ಡಾ. ಮಹಾಂತೇಶ ಕುರಿ, ದೇಶಪಾಂಡೆ ಫೌಂಡೇಷನ್ ಸಿಬ್ಬಂದಿ ಶಿವಾನಂದ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net