

ತುಮಕೂರು : ಕರೊನಾತಂಕದ ನಡುವೆ ಪದವಿ, ಸ್ನಾತಕ ಪದವಿ ಕಾಲೇಜುಗಳು ಸೋಮವಾರ ಪುನಾರಂಭವಾಗಲಿವೆ. ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯ 93 ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಲಿದ್ದು ಆನ್‌ಲೈನ್‌ನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳು ಕಡ್ಡಾಯವೇನಲ್ಲ.
ಕರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಕಲರವ ಕೇಳಲಿದೆ. ಆನ್‌ಲೈನ್ ತರಗತಿ ಜತೆಗೆ ಆಫ್‌ಲೈನ್ ತರಗತಿಗೆ ಅವಕಾಶ ಇದ್ದು, ಕಾಲೇಜುಗಳಲ್ಲಿ ಕರೊನಾ ಮಾರ್ಗಸೂಚಿ ಅನ್ವಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಕೊಠಡಿಗಳು, ಲ್ಯಾಬ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಶೇ. 92.96 ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ.
39,497 ಮಂದಿಗೆ ಲಸಿಕೆ: ಶೇ.80 ಲಸಿಕೆ ನೀಡಿಕೆ ಬಳಿಕ ಜು.26ರಿಂದ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ವಿವಿ ವ್ಯಾಪ್ತಿಯ 93 ಕಾಲೇಜುಗಳಲ್ಲಿ ಜೂ.28ರಿಂದ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕರೊನಾ ನಿರೋಧಕ ಲಸಿಕೆ ಅಭಿಯಾನ ಆರಂಭಿಸಲಾಯಿತು. 35,580 ಪದವಿ ವಿದ್ಯಾರ್ಥಿಗಳು, 3,220 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, 2,831 ಬೋಧಕರು, 1,189 ಬೋಧಕೇತರ ಸಿಬ್ಬಂದಿ ಸೇರಿದಂತೆ ಒಟ್ಟು 42,820 ಮಂದಿಗೆ ಕರೊನಾ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದ್ದು, ಈರೆಗೆ 39,497 ಮಂದಿಗೆ ಲಸಿಕೆ ಪಡೆದಿದ್ದಾರೆ.
ಆಫ್‌ಲೈನ್ ತರಗತಿಗಳು ನಡೆಯುತ್ತಿದ್ದು, ಪ್ರಸಕ್ತ ಸಾಲಿನ ತರಗತಿಗಳು ಆ. 31ರವರಗೆ ನಡೆಯಲಿವೆ. ಹಾಗಾಗಿ, ಭೌತಿಕ ತರಗತಿಗಳು ಕಡ್ಡಾಯವೇನಲ್ಲ. ಸೆಪ್ಟೆಂಬರ್‌ನಲ್ಲಿ ಸ್ನಾತಕೋತ್ತರ ಪದವಿಯ 4ನೇ ಹಾಗೂ ಪದವಿ 6ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿದ್ದು ಅಕ್ಟೋಬರ್‌ನಿಂದ ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಲಿವೆ.
ಆಫ್‌ಲೈನ್ ತರಗತಿಗಳು ಆರಂಭವಾಗುತ್ತಿದ್ದು ಭೌತಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ ಇರುವ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲೇ ಪಾಠ ಕೇಳಬಹುದು. ನಮ್ಮಲ್ಲಿ ಶೇ.92.96 ವಿದ್ಯಾರ್ಥಿಗಳು, ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಅಗತ್ಯ ಮುಂಜಾಗ್ರತ ಕ್ರಮಗಳೊಂದಿಗೆ ಆಫ್‌ಲೈನ್ ತರಗತಿ ಆರಂಭಿಸಲಿದ್ದೇವೆ.
ಪ್ರೊ.ವೈ.ಎಸ್.ಸಿದ್ದೇಗೌಡ ವಿವಿ ಕುಲಪತಿ
ಆ.2ರಿಂದ ಪರೀಕ್ಷೆಗಳು : ರಸ್ತೆ ಸಾರಿಗೆ ನೌಕರರ ಮುಷ್ಕರ ಹಾಗೂ ಕರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ಆ.2ರಿಂದ ನಡೆಯಲಿವೆ. ಮುಂದೂಡಲ್ಪಟ್ಟಿದ್ದ ಪದವಿ ಪರೀಕ್ಷೆಗಳು ಆ.2, 4 ಹಾಗೂ 6ರಂದು, ಬಿ.ಪಿ.ಇಡಿ., ಪರೀಕ್ಷೆಗಳು ಆ.2, 4,6, 9 ರಂದು, ಬಿ.ಇಡಿ., ಪರೀಕ್ಷೆಗಳು ಆ.9 ರಿಂದ 14ರವರಗೆ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ಆ.2ರಿಂದ 7ರವರೆಗೆ ಮರು ನಿಗದಿಯಾಗಿದ್ದು ಹೊಸ ವೇಳಾಪಟ್ಟಿಯಂತೆ ನಡೆಯಲಿವೆ.