ನಾಳೆಯಿಂದ ಕಾಲೇಜು ಶುರು: ವಿದ್ಯಾರ್ಥಿಗಳ ಕರ್ತವ್ಯ ಹೀಗಿದೆ...

Collage
Published on

ಬೆಂಗಳೂರು: ರಾಜ್ಯದಲ್ಲಿ ಅಧಿಕೃತವಾಗಿ ಶೈಕ್ಷಣಿಕ ವರ್ಷಾರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಮಂಗಳವಾರದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್​ಗಳ ತರಗತಿಗಳು ಆರಂಭವಾಗಲಿವೆ.

ಕರೊನಾ ಸಂಪೂರ್ಣವಾಗಿ ನಿಮೂಲನೆಯಾಗಿಲ್ಲವಾದ ಕಾರಣ ಶಾಲಾ- ಕಾಲೇಜುಗಳ ಆರಂಭದ ವಿಚಾರವಾಗಿ ಪರ- ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಕಾಲೇಜು ಆರಂಭದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ನ.9ರಂದೇ ಪ್ರಮಾಣಿತ ಕಾರ್ಯಚರಣಾ ವಿಧಾನ (ಎಸ್​ಒಪಿ) ಬಿಡುಗಡೆ ಮಾಡಿತ್ತು. ಮಾರ್ಗ ಸೂಚಿಯಂತೆ ಕಾಲೇಜುಗಳ ತರಗತಿ ಮತ್ತು ಶೌಚಗೃಹಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಇನ್ನೂ ವಿಶ್ವವಿದ್ಯಾಲಯಗಳಲ್ಲಿ ಹಾಸ್ಟೆಲ್​ಗಳೂ ಇರುವುದರಿಂದ ಮೂರು ದಿನದ ಹಿಂದೆಯೇ ಸ್ಯಾನಿಟೈಸ್ ಕಾರ್ಯಕ್ಕೆ ಚಾಲನೆ ದೊರೆತಿದೆ.

ಕರೊನಾ ಬಂದ ಮೇಲೆ ಭೌತಿಕ ತರಗತಿ ನಡೆಸಲು ಅನುಮತಿ ನೀಡರಲಿಲ್ಲ. ಇದರಿಂದ ಆನ್​ಲೈನ್​ನಲ್ಲೇ ಶಿಕ್ಷಣ ನಡೆಯುತ್ತಿತ್ತು. ಒಂದು ಕಡೆ ಪಾಲಕರ ಮುಚ್ಚಳಿಕೆ ಪತ್ರ ಪಡೆದು ಭೌತಿಕ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಸಹ ಸಿದ್ಧರಾಗಿದ್ದರೆ, ಮತ್ತೊಂದು ಕಡೆ ಕಾಲೇಜು ಆರಂಭದ ಮೊದಲ ದಿನದ ವಾತಾವರಣವನ್ನು ಪರಿಶೀಲಿಸಿ ಆನಂತರ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಮತ್ತಷ್ಟು ಪಾಲಕರು ಆಲೋಚಿಸಿದ್ದಾರೆ.

ಒಪ್ಪಿಗೆ ಪತ್ರ ಕಡ್ಡಾಯ: ಎಸ್​ಒಪಿನಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಕರಿಂದ ಒಪ್ಪಿಗೆ ಪತ್ರ ತರಬೇಕೆಂದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಪತ್ರ ಹಾಗೂ ಕರೊನಾ ಪರೀಕ್ಷೆಯ ಫಲಿತಾಂಶದ ಪತ್ರವನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

ತರಗತಿಗಳನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ. ತರಗತಿಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಎಸ್​ಒಪಿ ಅನುಷ್ಠಾನಕ್ಕೆ ಈಗಾಗಲೆ ಪ್ರಾಂಶುಪಾಲರ ಜತೆಗೆ ಸಭೆ ಮಾಡಿದ್ದೇನೆ. ವಿದ್ಯಾರ್ಥಿಗಳು ಭಯ ಬಿಟ್ಟು ಕಾಲೇಜಿಗೆ ಬರಬಹುದು. | ಡಾ.ಕೆ.ಆರ್.ವೇಣುಗೋಪಾಲ್ ಕುಲಪತಿ, ಬೆಂಗಳೂರು ವಿವಿ

ವಿದ್ಯಾರ್ಥಿಗಳ ಕರ್ತವ್ಯ

  • ಮಾಸ್ಕ್, ಸ್ಯಾನಿಟೈಸರ್ ತೆಗೆದುಕೊಂಡು ಹೋಗಬೇಕು
  • ಕ್ಯಾಂಪಸ್​ನಲ್ಲಿ ಉಗುಳ ಬಾರದು
  • ರು, ಊಟ ಮನೆಯಿಂದಲೇ ತರಬೇಕು
  • ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

ಆನ್​ಲೈನ್​ಗಿಂತ ಆಫ್ ಲೈನ್ ತರಗತಿಗೆ ಹೋಗುವುದು ನನಗೆ ಇಷ್ಟ. ಮಂಗಳವಾರದಿಂದ ಕಾಲೇಜಿಗೆ ಹೋಗಲು ನಾನು ಸಿದ್ಧನಿದ್ದೇನೆ. ಸ್ನೇಹಿತರನ್ನು ನೋಡುವ ತವಕ ಇದೆ. | ಆರ್.ತೇಜಸ್ ಪಾಲಿಟೆಕ್ನಿಕ್ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net