

ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಎಸ್‌ಡಿಪಿಐ ಮುಖಂಡರೊಬ್ಬರ ಪುತ್ರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದು, ಹಲ್ಲೆ ನಡೆಸಿದವರು ಮಾದಕದ್ರವ್ಯ ವ್ಯಸನಿಗಳು ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿ ಬಂಟ್ವಾಳ ಜೋಡುಮಾರ್ಗದ ಅಬ್ದುಲ್ ಹನ್ನಾನ್(19), ಪಾಣೆಮಂಗಳೂರಿನ ಇಬ್ರಾಹಿಂ ತಾಬೀಶ್(19), ಪಾಣೆಮಂಗಳೂರು ಮಹಮ್ಮದ್ ಶಾಕ್ೀ(19), ಬಂಟ್ವಾಳ ಬಿ ಮೂಡ ಮಹಮ್ಮದ್ ಶಾಯಿಕ್(19), ಬಜಾಲ್‌ನ ಯು.ಪಿ.ತನ್ವೀರ್(19), ಬಜಾಲ್ ನಂತೂರು ಅಬ್ದುಲ್ ರಶೀದ್(20) ಹಾಗೂ ಬಂಟ್ವಾಳದ ಮನ್ಸೂರ್(19) ಬಂಧಿತರು.
ವಿದ್ಯಾರ್ಥಿಗಳಾದ ಶಾಮೀರ್ ಮತ್ತು ಇಬ್ರಾಹಿಂ ಫಾಹಿಮ್ ಎಂಬವರನ್ನು ಆ.23ರಂದು ಎಸ್‌ಡಿಪಿಐ ಮುಖಂಡ ಪುತ್ರ ಅಬ್ದುಲ್ಲಾ ಹನ್ನಾನ್ ಸೇರಿದಂತೆ ಏಳು ಮಂದಿ ಬಲ್ಮಠ ಬಳಿಯ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಕಾರಿನಲ್ಲಿ ಅಪಹರಿಸಿ ಬಳಿಕ ಹೊರವಲಯದ ಅಡ್ಯಾರು ಬಳಿ ವಸತಿಗೃಹದಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಬಗ್ಗೆ ಬಂದರು ಪೊಲೀಸರಿಗೆ ದೂರು ನೀಡಲಾಗಿತ್ತು.ಯುವತಿಯ ವಿಚಾರಕ್ಕೆ ಸಂಬಂಧಿಸಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ನಗರದ ಕಾಲೇಜಿನ ಈ ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿದ ಆರೋಪಿಗಳು ಅಡ್ಯಾರಿನ ಫ್ಲಾೃಟ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ಬೆಲ್ಟ್, ಕೋಲು, ಚಾಕುವಿನಿಂದ ಮನಬಂದಂತೆ ರಕ್ತಹೆಪ್ಪುಗಟ್ಟುವಂತೆ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಕಾಸರಗೋಡಿನ ಉಪ್ಪಳ ನಿವಾಸಿ ಇಬ್ರಾಹಿಂ ಫಾಹಿಂ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ. ಈತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಡಿಪಿಐ ಮುಖಂಡನ ಪುತ್ರ ಹನ್ನಾನ್ ನೇತೃತ್ವದಲ್ಲಿ ಈ ಘಟನೆ ನಡೆದಿರುವುದಾಗಿ ಆರೋಪಿಸಲಾಗಿದೆ. ಬಂದರು ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.