

College Student: ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ, ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಇಬ್ಬರು ಶಿಕ್ಷಕರು ಮತ್ತು ಅವರ ಸ್ನೇಹಿತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಮತ್ತು ಅವರ ಸ್ನೇಹಿತ ಅನೂಪ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ನರೇಂದ್ರ ಮೊದಲು ಶೈಕ್ಷಣಿಕ ಟಿಪ್ಪಣಿಗಳನ್ನು ಹಂಚಿಕೊಳ್ಳುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಸಂಪರ್ಕಿಸಿ, ಕ್ರಮೇಣ ನಿರಂತರವಾಗಿ ಸಂದೇಶ ಕಳುಹಿಸುವ ಮೂಲಕ ಆಕೆಯ ಸ್ನೇಹ ಬೆಳೆಸಿಕೊಂಡ. ನಂತರ ಬೆಂಗಳೂರಿನಲ್ಲಿರುವ ಅನೂಪ್ ಎಂಬಾತನ ಕೋಣೆಗೆ ಕರೆಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ನಡೆದ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ.
ಇನ್ನೋರ್ವ ಉಪನ್ಯಾಸಕ ಸಂದೀಪ್, ನರೇಂದ್ರ ಜೊತೆಗಿನ ವಿಡಿಯೋ, ಫೋಟೋ ಬಳಸಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ, ಅನೂಪ್ ಮನೆಯಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಇದಾದ ನಂತರ ಅನೂಪ್, ತನ್ನ ಕೋಣೆಗೆ ಪ್ರವೇಶಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿ ವಿದ್ಯಾರ್ಥಿನಿಯನ್ನು ಬೆದರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆಘಾತಕ್ಕೊಳಗಾದ ವಿದ್ಯಾರ್ಥಿನಿ ಬೆಂಗಳೂರಿಗೆ ಆಗಮಿಸಿ, ತನ್ನ ತಂದೆ ತಾಯಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ್ದಾಳೆ. ನಂತರ ಸಂತ್ರಸ್ತೆಯ ಪೋಷಕರು ಕರ್ನಾಟಕ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.(ಏಜೆನ್ಸೀಸ್)