ನಿರಂತರ ಕ್ರೀಡಾ ಚಟುವಟಿಕೆಗಳಿಂದ ಜೀವನದಲ್ಲಿ ನವಚೈತನ್ಯ ಸೃಷ್ಟಿ

KKNR SPORTS
ಕುಕನೂರಿನಲ್ಲಿ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟವನ್ನು ಮಾಜಿ ಜಿಪಂ ಅಧ್ಯಕ್ಷ ರಾಮಣ್ಣ ಭಜಂತ್ರಿ ಉದ್ಘಾಟಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ಪಕೀರಪ್ಪ ವಜ್ರಬಂಡಿ, ಪ್ರಾಚಾರ್ಯ ಈಶಪ್ಪ ಮಳಗಿ, ಕಾರ್ಯದರ್ಶಿ ಮಾರುತಿ ಲಕ್ಮಾಪುರ್, ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ನಿಂಗಪ್ಪ ಗುರ್ಲೆಕೊಪ್ಪ ಇದ್ದರು.
Published on

ಕುಕನೂರು: ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ. ನಿರಂತರ ಕ್ರೀಡಾ ಚಟುವಟಿಕೆಗಳು ಜೀವನಕ್ಕೆ ಹುಮ್ಮಸ್ಸು ನೀಡುತ್ತವೆ ಎಂದು ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಮಾನವನಲ್ಲಿ ನಿರಂತರ ಕ್ರಿಯಾಶೀಲತೆ ಜತೆಗೆ ನವಚೈತನ್ಯವನ್ನುಂಟು ಮಾಡುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವಿಕೆಯಿಂದ ಮುಪ್ಪಿನ ವೇಳೆ ಆರೋಗ್ಯ ರಕ್ಷಣೆ ಸಾಧ್ಯ ಎಂದರು.

ಕ್ರೀಡಾಪಟುಗಳು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಹಂತದಲ್ಲಿ ಪಾಲ್ಗೊಳ್ಳುತ್ತಿದ್ದು, ಸೋಲು-ಗೆಲುವು ಸಹಜ. ಸ್ನೇಹ ಬಾಂಧವ್ಯದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಪ್ರಾಮಾಣಿವಾಗಿ ಆಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು. ತಾಲೂಕು ಮಟ್ಟಕ್ಕೆ ಬಂದಿರುವ ಕ್ರೀಡಾಪಟುಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲೆಂದು ಹಾರೈಸಿದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಪಕೀರಪ್ಪ ವಜ್ರಬಂಡಿ ಮಾತನಾಡಿ, ಆಧುನಿಕ ಯುಗದಲ್ಲಿ ಮಾನವನ ಜೀವನ ಯಾಂತ್ರಿಕೃತವಾಗಿದೆ. ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವ ಮಹತ್ವವನ್ನು ಕ್ರೀಡೆಗೂ ನೀಡಬೇಕು. 40 ವರ್ಷದ ನಂತರ ರಕ್ತದೊತ್ತಡ, ಮಧುಮೇಹ ಮುಂತಾದ ಅನಾರೋಗ್ಯಗಳು ಎದುರಾಗುತ್ತವೆ. ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಪ್ರಾಚಾರ್ಯ ಈಶಪ್ಪ ಮಳಗಿ, ಕಾರ್ಯದರ್ಶಿ ಮಾರುತಿ ಲಕ್ಮಾಪುರ್, ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ನಿಂಗಪ್ಪ ಗುರ್ಲೆಕೊಪ್ಪ, ಮುತ್ತಣ್ಣ ಎ.ಎಚ್., ಧರ್ಮಪ್ಪ ನಾಯಕ, ಪೀರ್‌ಸಾಬ್, ಶರಣಪ್ಪ ವೀರಾಪುರ, ಉಮೇಶ್ ಕಂಬಳಿ, ಎನ್.ಪಾಂಡುರಂಗ, ಕೃಷ್ಣಮೂರ್ತಿ ಗಧಾರಿ, ಎಸ್.ಆರ್.ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net