ವಾರದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

college JPG
Published on

ಮಂಗಳೂರು: ಅಂತಿಮ ಪದವಿ ತರಗತಿ ಆಫ್‌ಲೈನ್ ಕ್ಲಾಸ್ ಆರಂಭವಾಗಿ ಒಂದು ವಾರದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ.

ಸೋಮವಾರ 2474 ಮಂದಿ ಕಾಲೇಜಿಗೆ ಹಾಜರಾಗಿದ್ದಾರೆ. ಈ ಪೈಕಿ ದ.ಕ ಜಿಲ್ಲೆಯಲ್ಲಿ 1661, ಉಡುಪಿ 645 ಮತ್ತು ಕೊಡಗು ಜಿಲ್ಲೆಯಲ್ಲಿ 168 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆ ಮೂಲಕ ಒಟ್ಟು ಹಾಜರಾತಿ ಶೇ.12ಕ್ಕೆ ಏರಿಕೆಯಾಗಿದೆ.

ಈ ನಡುವೆ ಕರೊನಾ ಪಾಸಿಟಿವ್ ವರದಿ ಕೈಸೇರಿದರೂ, ಹಲವರು ಆನ್‌ಲೈನ್ ಕ್ಲಾಸ್ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಜಿಲ್ಲೆಯಲ್ಲಿ 29 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ವರದಿಯಾಗಿರುವುದರಿಂದ ಕಾಲೇಜಿಗೆ ಬಂದು ಕೋವಿಡ್ ಕಾಣಿಸಿಕೊಳ್ಳಬಹುದು ಎನ್ನುವ ಹೆದರಿಕೆ ಕೆಲವು ವಿದ್ಯಾರ್ಥಿಗಳಲ್ಲಿದೆ ಎನ್ನುತ್ತಾರೆ ಪ್ರಾಧ್ಯಾಪಕರು.

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಈವರೆಗೆ ಯಾವುದೇ ತರಗತಿ ನಡೆದಿಲ್ಲ. ಆದರೆ ಆನ್‌ಲೈನ್ ತರಗತಿಗಳು ಎಂದಿನಂತೆ ಮುಂದುವರಿದಿದ್ದು, ದಿನಕ್ಕೆ ಬೆರಳೆಣಿಕೆ ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬರುತ್ತಿದ್ದಾರೆ ಎಂದು ಪ್ರಾಂಶುಪಾಲ ಡಾ.ಹರೀಶ್ ಎ. ತಿಳಿಸಿದ್ದಾರೆ.

ಇಲ್ಲಿಯವರೆಗೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 19054 ಮಂದಿಯ ಸ್ವಾಬ್ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 29 ಪಾಸಿಟಿವ್ ವರದಿಯಾಗಿದೆ. ಭಾನುವಾರ ಮತ್ತು ಸೋಮವಾರ ಒಟ್ಟು 2613 ಮಂದಿಯ ಗಂಟಲ ದ್ರವ ಸಂಗ್ರಹಿಸಲಾಗಿದ್ದು, ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ಇಲ್ಲ ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ಮಾಹಿತಿ ನೀಡಿದ್ದಾರೆ.

ಪಾಸಾದ ವಿದ್ಯಾರ್ಥಿಗಳು ಫೇಲ್!

ವಿವಿ ಅಂತಿಮ ಪದವಿ ಪರೀಕ್ಷೆ ಬರೆದ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಏರುಪೇರಾಗಿದೆ. ಪುತ್ತೂರಿನ ಖಾಸಗಿ ಕಾಲೇಜಿನ ಬಿಎ ವಿಭಾಗದ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬರಿಗೆ ಕಡಿಮೆ ಅಂಕ ಬಂದಿದ್ದರೆ ಇನ್ನೋರ್ವರಿಗೆ ವೆಬ್‌ಸೈಟ್‌ನಲ್ಲಿ ಪಾಸ್, ಅಂಕಪಟ್ಟಿಯ ಪ್ರಿಂಟ್‌ಔಟ್‌ನಲ್ಲಿ ಫೇಲ್ ತೋರಿಸುತ್ತಿದೆ. ಜತೆಗೆ ಬಿಕಾಂನಲ್ಲಿ ಹಲವರಿಗೆ ಒಂದೇ ರೀತಿ ಅಂಕ ಬಂದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎಲ್ಲಿ ಸಮಸ್ಯೆಯಾಗಿದೆ ಎಂದು ಪತ್ತೆ ಹಚ್ಚಿ ತಕ್ಷಣ ಬಗೆಹರಿಸುವಂತೆ ಸೂಚನೆ ನೀಡಿರುವುದಾಗಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ. ಸಾಫ್ಟ್‌ವೇರ್ ಸಮಸ್ಯೆಯಿಂದ ಹೀಗಾಗಿದ್ದು, ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಅಂತಿಮ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಇಂದು ವಿಶ್ವವಿದ್ಯಾಲಯ ಅಧಿಕೃತವಾಗಿ ಪ್ರಕಟಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net