ಎರಡನೇ ದಿನವೂ ಬಾರದ ವಿದ್ಯಾರ್ಥಿಗಳು

corona new
Published on

ಮಂಗಳೂರು: ಪದವಿ ಕಾಲೇಜು ಬಾಗಿಲು ತೆರೆದರೂ, ಎರಡನೇ ದಿನ ಬುಧವಾರವೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟಿನ ಹೆಚ್ಚಳ ಕಂಡುಬಂದಿಲ್ಲ. ಮಂಗಳವಾರಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತುಸು ಹೆಚ್ಚಳವಾಗಿದೆ.

ಹಬ್ಬದ ವಾತಾವರಣ, ಕೈಗೆ ಸಿಗದ ಕರೊನಾ ನೆಗೆಟಿವ್ ಸರ್ಟಿಫಿಕೆಟ್, ಭಯ ಮೊದಲಾದ ಕಾರಣಗಳಿಂದ ವಿದ್ಯಾರ್ಥಿಗಳು ಕಾಲೇಜಿನಿಂದ ದೂರವೇ ಉಳಿದರು. ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸ್ಪಲ್ಪ ಹೆಚ್ಚಿತ್ತು. ಕೆಲವು ಕಾಲೇಜುಗಳಲ್ಲಿ ಮೊದಲ ದಿನ ಹಾಜರಾದವರೂ, ಎರಡನೇ ದಿನ ಗೈರಾದರು. ಇನ್ನೊಂದು ವಾರದವರೆಗೆ ಯಥಾಸ್ಥಿತಿ ಮುಂದುವರಿಯಬಹುದು ಎನ್ನುತ್ತಾರೆ ಹಂಪನಕಟ್ಟೆ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲ ಡಾ.ಹರೀಶ್.

ಕರೊನಾ ಪರೀಕ್ಷೆಗೆ ವ್ಯವಸ್ಥೆ: ತರಗತಿಗೆ ಹಾಜರಾಗಲು ಕರೊನಾ ಟೆಸ್ಟ್ ಮತ್ತು ನೆಗೆಟಿವ್ ಪ್ರಮಾಣಪತ್ರ ಅಗತ್ಯ ಇರುವುದರಿಂದ ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಸಿಬ್ಬಂದಿಗಾಗಿ ವಿಶೇಷ ಕ್ಯಾಂಪ್ ಆಯೋಜಿಸಿ ಗಂಟಲ ದ್ರವ ಮಾದರಿ ಸಂಗ್ರಹಿಸಿದ್ದಾರೆ. ಮಂಗಳೂರು ವಿವಿ ಕಾಲೇಜಿನಲ್ಲಿ ಉಪನ್ಯಾಸಕರು-ಸಿಬ್ಬಂದಿ ಸೇರಿ 110 ಮಂದಿಯ ಪರೀಕ್ಷೆ ಮಾಡಲಾಗಿದೆ. ಇನ್ನೊಂದೆಡೆ ರಥಬೀದಿ ಕಾಲೇಜಿನಲ್ಲೂ ಕಳೆದ ನಾಲ್ಕು ದಿನಗಳಿಂದ ವಿದ್ಯಾರ್ಥಿಗಳಿಗೆ ಕರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ನಗರದ ಕೆನರಾ ಕಾಲೇಜಿನಲ್ಲಿ ಟೆಸ್ಟ್ ಮಾಡಿಸಲು ಇಚ್ಚಿಸುವ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಕಾಲೇಜಿನಲ್ಲೇ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ.

ಹಾಸ್ಟೆಲ್‌ಗೂ ಕೋವಿಡ್ ವರದಿ ಕಡ್ಡಾಯ

ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಮ್ಮ ಪಾಲಕರ ಅನುಮತಿ ಪತ್ರ ಹಾಗೂ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಯಾಂಪಸ್ ಖಾಲಿ ಖಾಲಿ

ಉಡುಪಿ: ಜಿಲ್ಲೆಯ ಕಾಲೇಜು ಕ್ಯಾಂಪಸ್‌ಗಳು ಬುಧವಾರವೂ ಖಾಲಿಯಾಗಿದ್ದವು. ಅಧ್ಯಾಪಕರೆಲ್ಲರೂ ಕೋವಿಡ್ ಪರೀಕ್ಷೆ ಮುಗಿಸಿ ತರಗತಿ ನಡೆಸಲು ಸಿದ್ಧರಾಗಿದ್ದಾರೆ. ಆರೋಗ್ಯವಾಗಿರುವ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಹೆತ್ತವರು ಹಿಂದೇಟು ಹಾಕುತ್ತಿರುವುದು, ಅನಗತ್ಯ ಟೆಸ್ಟ್ ಯಾಕೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಎಂಜಿಎಂ ಕಾಲೇಜಿನಲ್ಲಿ ಹಾಜರಾದ ನಾಲ್ವರು ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗಿದೆ. ಮಂಗಳವಾರ 319 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಗುರುವಾರ ವರದಿ ಕೈ ಸೇರುತ್ತದೆ. ಶೇ.50 ವಿದ್ಯಾರ್ಥಿನಿಯರು ಗುರುವಾರ ಅಥವಾ ಶುಕ್ರವಾರದಿಂದ ತರಗತಿಗೆ ಬರುವ ಸಾಧ್ಯತೆ ಇದೆ. ಉಳಿದ ವಿದ್ಯಾರ್ಥಿನಿಯರಿಗೆ ಆನ್‌ಲೈನ್ ತರಗತಿ ಮುಂದುವರಿಯುತ್ತದೆ. ಉಪನ್ಯಾಸಕರೆಲ್ಲರ ಕೋವಿಡ್ ಟೆಸ್ಟ್ ಮುಗಿದಿದೆ ಎಂದು ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗಲಿದೆ. ಆನ್‌ಲೈನ್ ಕ್ಲಾಸ್‌ಗೂ ಅವಕಾಶವಿರುವ ಕಾರಣ, ಕೆಲವರು ಅದರಲ್ಲೇ ಮುಂದುವರಿಯಲು ಇಚ್ಛಿಸಿದ್ದಾರೆ. ಟೆಸ್ಟ್ ಮಾಡಿಸಿ ಕರೊನಾ ಪಾಸಿಟಿವ್ ವರದಿ ಬಂದರೆ ಮನೆಮಂದಿಯೆಲ್ಲ ಕ್ವಾರಂಟೈನ್ ಆಗಬೇಕಾದೀತು ಎನ್ನುವ ಭಯವೂ ಇದಕ್ಕೆ ಕಾರಣವಿರಬಹುದು. ಮುಂದಿನ ವಾರದ ವೇಳೆಗೆ ಶೇ.50ರಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುವ ನಿರೀಕ್ಷೆಯಿದೆ.

ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net