

ಮೈಸೂರು: ರಂಗಾಯಣ ವತಿಯಿಂದ ನ.11 ರಿಂದ 15ರವರೆಗೆ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.
ರಂಗಾಯಣದ ಭೂಮಿಗೀತದಲ್ಲಿ ನ.11 ರಂದು 5.30ಕ್ಕೆ ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ ಕಾಲೇಜು ರಂಗೋತ್ಸವಕ್ಕೆ ಚಾಲನೆ ನೀಡುವರು. ಕಿರುತೆರೆ ಕಲಾವಿದೆ ಸುಷ್ಮಾ ನಾಣಯ್ಯ, ನಾಟಕಕಾರ ಡಾ.ರಾಜಪ್ಪ ದಳವಾಯಿ, ರಂಗಕರ್ಮಿ ಎಚ್.ಎಸ್.ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು, ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯ, ಅಮೃತಾ ವಿಶ್ವವಿದ್ಯಾಪೀಠಂ, ಹುಣಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮರದೂರಿನ ಲಾ ಸಲೆಟ್ ಪಿಯು ಕಾಲೇಜು ತಂಡಗಳು ಬಿ.ವಿ.ಕಾರಂತ ಕಾಲೇಜು ತಂಡಗಳು ಭಾಗವಹಿಸಲಿವೆ ಎಂದರು.
ರಂಗಾಯಣದ ವಾರಾಂತ್ಯ ರಂಗಪ್ರದರ್ಶನದಲ್ಲಿ ನ.10, 17 ಮತ್ತು 24 ರಂದು ಭೂಮಿಗೀತ ರಂಗಮಂದಿರದಲ್ಲಿ ‘ಚೆಕ್‌ಮೇಟ್’ ನಾಟಕ ಪ್ರದರ್ಶನಗೊಳ್ಳಲಿದೆ.‘ಚೆಕ್‌ಮೇಟ್’ ನಾಟಕವು ಆಗಸ್ಟ್ 2007ರಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಈ ನಾಟಕವು ರಂಗಾಯಣ ರೆಪರ್ಟರಿ ತಂಡದ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ನಾಟಕವಾಗಿದ್ದು, ನ.17ರಂದು ತನ್ನ 100ನೇ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕಾಲೇಜು ರಂಗೋತ್ಸವದ ಸಂಚಾಲಕಿ ಕೆ.ಆರ್.ನಂದಿನಿ, ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ, ಎಂ.ಎಸ್.ಗೀತಾ, ಹುಲಗಪ್ಪ ಕಟ್ಟಿಮನಿ ಇದ್ದರು.