

ಚನ್ನರಾಯಪಟ್ಟಣ : ವಿದ್ಯಾರ್ಥಿಗಳು ಉತ್ತಮ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸಬೇಕು ಎಂದು ಶ್ರವಣಬೆಳಗೊಳದ ಎಸ್.ಎನ್. ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಸ್. ದಿನೇಶ್ ಹೇಳಿದರು.
ನವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನವೋದಯ ಪದವಿಪೂರ್ವ ಕಾಲೇಜಿನ 2023-24 ನೇ ಸಾಲಿನ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಗೀಳಿಗೆ ಮಾರುಹೋಗಿದ್ದಾರೆ. ಇದು ನಮ್ಮೊಳಗಿನ ಕ್ರಿಯಾಶೀಲತೆಯನ್ನು ಬಲಿತೆಗೆದುಕೊಂಡಿದೆ ಎಂದವರು ಕಳವಳ ವ್ಯಕ್ತಪಡಿಸಿದರು. ದಶಕಗಳ ಹಿಂದೆ ತಾಯಿ ತನ್ನ ಮಗುವಿಗೆ ದೇಶಭಕ್ತಿ, ಸಮಾಜಸೇವೆ ಸೇರಿದಂತೆ ಹಲವು ಸಂಸ್ಕಾರವನ್ನು ನೀಡಿ ಸತ್ಪ್ರಜೆಯನ್ನಾಗಿ ಮಾಡುತ್ತಿದ್ದಳು. ಇಂದು ಪಾಲಕರೇ ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್ ಕೊಟ್ಟು ಸಮಾಧಾನ ಪಡಿಸುವುದು ಸಾಮಾನ್ಯವಾಗಿರುವುದು ಖೇದನೀಯ ಎಂದರು. ಯುವ ಜನರು ಸಾಹಿತ್ಯದ ನಂಟು ಬೆಳೆಸಿಕೊಂಡು ಜ್ಞಾನಶೀಲರಾಗಬೇಕು ಎಂದವರು ಸಲಹೆ ನೀಡಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭಾರತದ ಕಲೆ ಮತ್ತು ಸಂಸ್ಕೃತಿಗೆ ಜಗತ್ತಿನಾದ್ಯಂತ ಮಹತ್ವದ ಸ್ಥಾನವಿದೆ. ಇದನ್ನು ಯುವಜನರು ಅರ್ಥ ಮಾಡಿಕೊಂಡು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಈ ವಿದ್ಯಾ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ ಎಂದು ಶ್ಲಾಘಿಸಿದರು.
ನವೋದಯ ವಿದ್ಯಾ ಸಂಘದ ಅಧ್ಯಕ್ಷ ಟಿ.ಸಿ.ಬಸವರಾಜು, ಕಾರ್ಯದರ್ಶಿ ಬಿ.ಎಸ್.ಭೋಜ್‌ರಾಜ್ ಬಹುಮಾನ ವಿತರಣೆ ಮಾಡಿದರು. ಪ್ರಾಂಶುಪಾಲ ಎಂ.ಎಸ್.ಕಾಂತರಾಜು, ಗೌರವಾಧ್ಯಕ್ಷ ಸಿ.ಎಸ್.ಸುರೇಶ್, ಉಪಾಧ್ಯಕ್ಷ ಜಿ.ಎಂ.ಕಿರಣ್, ಸಹ ಕಾರ್ಯದರ್ಶಿ ಸಿ.ಜಿ.ವೇಣುಗೋಪಾಲ್ ಮುಖ್ಯೋಪಾಧ್ಯಾಯ ಸೀತಾರಾಮ್, ಎನ್, ಮಂಜುನಾಥ್, ಸತ್ಯವತಿ ಇದ್ದರು.