

ಕಾರವಾರ:ಅಣ್ಣನ ಹೆಸರಲ್ಲಿ ತಮ್ಮ ಮೂರು ವರ್ಷ ಕಾಲೇಜ್‌ಗೆ ತೆರಳಿದ ವಿಚಿತ್ರ ಘಟನೆ ಭಟ್ಕಳದಲ್ಲಿ ನಡೆದಿದೆ. ಈ ಸಂಬಂಧ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲರು ಇಬ್ಬರ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಭಟ್ಕಳದ ರೋಹಿತ್ ಕುಮಾರ್ ಖಾಸಗಿ ಉದ್ಯೋಗ ಮಾಡುತ್ತಿದ್ದ. ಆತನ ಹೆಸರು ಹಾಗೂ ದಾಖಲೆಗಳನ್ನು ಬಳಸಿಕೊಂಡು ತಮ್ಮ ರಂಜಿತ್ ಕುಮಾರ್ ದುರ್ಗಪ್ಪ ನಾಯ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ 2022 ರಿಂದ ಓದಿದ್ದ. ಬುಧವಾರ ಪರೀಕ್ಷೆ ನಡೆದಿದ್ದಾಗ ವಿಶ್ವ ವಿದ್ಯಾಲಯದ ವಿಚಕ್ಷಣ ಅದಳ ಅಭ್ಯರ್ಥಿಗಳು ಆಗಮಿಸಿ ಪರಿಶೀಲನೆ ನಡೆಸಿದಾಗ ಈ ವಿಷಯ ಬಯಲಾಗಿದೆ. ಈ ಸಂಬಂಧ ಕಾಲೇಜ್‌ನ ಪ್ರಾಂಶುಪಾಲ ನಾಗೇಶ ಗಣಪತಿ ಶೆಟ್ಟಿ ದೂರು ದಾಖಲಿಸಿದ್ದಾರೆ. ರಂಜಿತ್ ಕುಮಾರ್ ಎಂಬಿಎ ಓದಿದವನಾಗಿದ್ದು ಮತ್ತೆ ಪದವಿ ತರಗತಿಗೆ ಬರುತ್ತಿದ್ದ. ಸಾಕಷ್ಟು ಉತ್ತಮವಾಗಿ ಓದುತ್ತಿದ್ದ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಆದರೆ, ಆತ ಮತ್ತೆ ಪದವಿ ಓದಿದ್ದೇಕೆ ಎಂಬುದು ಅಚ್ಚರಿಕೆ ಕಾರಣವಾಗಿದೆ.