ವೃತ್ತಿ ನಿರತರಿಗೆ ಉನ್ನತ ಶಿಕ್ಷಣ

Student
Published on

ಹರೀಶ್ ಮೋಟುಕಾನ ಮಂಗಳೂರು
ಉದ್ಯೋಗ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯುವ ಯುವಜನತೆಗೆ ನೆರವಾಗುವ ಉದ್ದೇಶದಿಂದ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಸಂಧ್ಯಾ(ಸಂಜೆ) ಕಾಲೇಜು ಆರಂಭಿಸಲಾಗಿದೆ.

ಶಾಸಕ ಹಾಗೂ ರಥಬೀದಿ ಸರ್ಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಡಿ.ವೇದವ್ಯಾಸ ಕಾಮತ್ ಅವರ ವಿಶೇಷ ಮುತುವರ್ಜಿಯಿಂದ ಕಾಲೇಜಿನಲ್ಲಿ ಸಂಧ್ಯಾ ಕಾಲೇಜು ಪರಿಕಲ್ಪನೆ ಜಾರಿಗೆ ಬಂದಿದೆ. ದುಡಿಯುವ ಕೈಗಳಿಗೆ ಈ ಕಾಲೇಜಿನ ಆವರಣದಲ್ಲಿಯೇ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಧ್ಯಾ ಶಕ್ತಿ ಯೋಜನೆಯಡಿ ಸಂಧ್ಯಾ ಕಾಲೇಜು ಆರಂಭಗೊಂಡಿದೆ.

ರಾಜ್ಯದ ಆಯ್ದ ಮಹಾನಗರ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಸಂಧ್ಯಾ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ 2021-22ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಮಂಗಳೂರು ಪಾಲಿಕೆ ಸಹಿತ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಉಪಯೋಗಿಸಿಕೊಂಡು ಸಂಧ್ಯಾ ಕಾಲೇಜು ಆರಂಭಿಸಲಾಗಿದೆ.
ಬಿ.ಕಾಂ, ಬಿಸಿಎಗೆ ಅವಕಾಶ: ವಿದ್ಯಾರ್ಥಿಗಳು ಅತಿ ಹೆಚ್ಚು ಆಯ್ಕೆ ಮಾಡಿಕೊಳ್ಳುವ ಉತ್ತಮ ಉದ್ಯೋಗವಕಾಶಗಳಿಗೆ ಪೂರಕವಾಗುವ ಕೋರ್ಸ್‌ಗಳಾದ ಬಿ.ಕಾಂ., ಬಿಸಿಎಗಳನ್ನು ಸಂಧ್ಯಾ ಶಕ್ತಿ ಯೋಜನೆಯಡಿ ರಾಜ್ಯದ 11 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 11 ಸರ್ಕಾರಿ ಪ್ರಥಮದರ್ಜೆ ಸಂಜೆ ಕಾಲೇಜುಗಳಲ್ಲಿ ಆರಂಭಿಸಲಾಗಿದೆ. ಅದರಂತೆ ಕಾರ್‌ಸ್ಟ್ರೀಟ್ ಕಾಲೇಜಿನಲ್ಲೂ ಬಿ.ಕಾಂ ಹಾಗೂ ಬಿ.ಸಿ.ಎ. ಕೋರ್ಸ್ ಆರಂಭಗೊಂಡಿದೆ.

ವಾರ್ಷಿಕ 57 ಲಕ್ಷ ರೂ. ವೆಚ್ಚ: ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಪ್ರಾಧ್ಯಾಪಕರನ್ನು ಪ್ರಾಂಶುಪಾಲರನ್ನಾಗಿಸಲು ಉದ್ದೇಶಿಸಲಾಗಿದೆ. ಉಳಿದಂತೆ 7 ಬೋಧಕರು ಸಹಿತ ಒಟ್ಟು 13 ಸಿಬ್ಬಂದಿ ಒದಗಿಸಲು ಅನುಮತಿ ಕೇಳಲಾಗಿದೆ. ಪ್ರತಿ ಕಾಲೇಜಿಗೆ ವಾರ್ಷಿಕ 57 ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆ ಇದೆ.

ರಾಜ್ಯ ಸರ್ಕಾರದ ಸಂಧ್ಯಾಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವೃತ್ತಿ ನಿರತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಧ್ಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿದೆ. ಅದರಂತೆ ಮಂಗಳೂರಿನ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕಾಲೇಜನ್ನು ಆರಂಭಿಸಲು ಸರ್ಕಾರ ಆದೇಶಿಸಿದೆ. ವೃತ್ತಿನಿರತ ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ.
ವೇದವ್ಯಾಸ ಕಾಮತ್, ಶಾಸಕ

ಸಂಧ್ಯಾ ಕಾಲೇಜಿನಲ್ಲಿ ಪ್ರಸ್ತುತ ಬಿ.ಕಾಂ ಮತ್ತು ಬಿ.ಸಿ.ಎ ಕೋರ್ಸ್ ಆರಂಭಗೊಂಡಿದೆ. ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ತಲಾ 10 ಅರ್ಜಿಗಳು ಹೋಗಿದ್ದು, ಈಗಾಗಲೇ ಓರ್ವ ವಿದ್ಯಾರ್ಥಿಯ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಪ್ರೊ.ರಾಜಶೇಖರ ಹೆಬ್ಬಾರ್, ಪ್ರಾಂಶುಪಾಲ, ಕಾರ್‌ಸ್ಟ್ರೀಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net