

ಅರಕಲಗೂಡು : ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರಗಳನ್ನೂ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಎ. ಮಂಜು ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಗುರಿ ಸಾಧನೆ ತಲುಪಲು ಕಲಿಕೆ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಗಳಿಕೆಗಷ್ಟೇ ಆದ್ಯತೆ ನೀಡದೆ ಉತ್ತಮ ನಡವಳಿಗೆ ಶಿಸ್ತು ಮೈಗೂಡಿಸಿಕೊಳ್ಳುವುದು ಮುಖ್ಯ. ಆಧುನಿಕತೆಯ ಜೀವನ ಶೈಲಿಗೆ ಒಗ್ಗಿಕೊಂಡು ವಿದ್ಯೆ ಕಲಿತ ಬಳಿಕ ತಮಗೆ ಶಿಕ್ಷಣ ಕೊಡಿಸಲು ಜೀವವನ್ನೆ ಮುಡುಪಾಗಿರಿಸಿದ ಪಾಲಕರನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಸಿಗುತ್ತಿದೆ. ಈ ಕಾಲೇಜಿನಲ್ಲಿ ಕಲಿತ ಅನೇಕರು ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮುಖ್ಯವಾಗಿ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಹಾಗೂ ಸಮಾಜಕ್ಕೆ ಉನ್ನತ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅನಂತರಾಜು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನರಸೇಗೌಡ, ಸದಸ್ಯರಾದ ಶಂಕರ್, ಮಂಜು, ದಿವಾಕರ್, ಪ್ರಾಂಶುಪಾಲೆ ಗಾಯತ್ರಿ, ಉಪನ್ಯಾಸಕರಾದ ಉಷಾ, ಲಾಡಪ್ಪ, ಪ್ರದೀಪ್ ಇತರರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.