ವಿದ್ಯಾರ್ಥಿಗಳು ಪಠ್ಯವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕು

college
Published on

ಮಡಿಕೇರಿ:

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜತೆಗೆ ಪಠ್ಯದಲ್ಲೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲೂಕು ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಅನಾವರಣಗೊಳಿಸಲು ಇಂಥ ವೇದಿಕೆ ಅಡಿಪಾಯ ಆಗಲಿದೆ. ವಿದ್ಯಾರ್ಥಿ ದಿಸೆಯಲ್ಲಿ ಇಂತಹ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಹಾಗಿದ್ದಾಗ ಮಾತ್ರ ಸಾಂಸ್ಕೃತಿಕ ಕಲಾ ವೈಭವ ಪ್ರದರ್ಶಿಸಲು ಸಾಧ್ಯ. ವಿದ್ಯಾರ್ಥಿಗಳ ಜತೆಯಲ್ಲಿ ಉಪನ್ಯಾಸಕರು ಕೂಡ ವೇದಿಕೆ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬAಧ ಬೆಳೆಸಿಕೊಳ್ಳಬೇಕು. ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹುಣಸೂರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ ಪುರಷ್ಕೃತ ಹೆಚ್.ಎನ್. ಗಿರೀಶ್ ಮಾತನಾಡಿ, ಮಕ್ಕಳಲ್ಲಿ ಬಹು ಮುಖ್ಯವಾಗಿ ತಾಳ್ಮೆ, ಗೌರವ ಇರಬೇಕು. ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳಲು ಓದುವ ಸಮಯದಲ್ಲಿ ಗುರಿ ಇಟ್ಟುಕೊಳ್ಳಬೇಕು. ಯುವ ಜನಾಂಗ ತಮ್ಮ ಮನಸ್ಸನ್ನು ಗಾಳಿಗೆ ತೂರದೇ ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ತಮ್ಮ ಸಾಧನೆಯ ಗುರಿ ಮುಟ್ಟಲು ಸಾಧ್ಯವಿದೆ. ಅನಾವಶ್ಯಕ ಮೊಬೈಲ್ ಬಳಕೆಯಿಂದ ಆಗುವ ಅನಾಹುತ ಹಾಗೂ ಕ್ಷಣಿಕ ಸುಖಕ್ಕಾಗಿ ತಮ್ಮ ಬದುಕನ್ನು ವಿದ್ಯರ್ಥಿಗಳು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪೋಷಕರು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಇರಬೇಕು. ಗುರು, ಪುಸ್ತಕ, ಪೋಷಕರನ್ನು ಪ್ರೀತಿಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಇರಬೇಕಾಗಿದೆ. ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇವೆಲ್ಲದರಿಂದ ವಿಶೇಷ ವಿದ್ಯಾರ್ಥಿ ರೂಪುಗೊಳ್ಳಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜೇಗೌಡ, ಬೋಧನೆಯು ಶೈಕ್ಷಣಿಕ, ದೈಹಿಕವಾಗಿ ತರಗತಿಯಲ್ಲಿ ನಡೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊರ ಪ್ರಪಂಚರ ದಾಸರಾಗಿ ಕೆಲವರ ಪ್ರಭಾವಕ್ಕೆ ಒಳಗಾಗಿ ಶಿಕ್ಷಣ ಹಂತವನ್ನು ಮುಂದುವರೆಸದೆ ದಾರಿ ತಪ್ಪುತ್ತಿರುವುದು ಬೇಸರ ತಂದಿದೆ. ಅದರ ಪ್ರಭಾವದಿಂದ ಶಿಕ್ಷಣ ಪ್ರಭಾವ ನಾಶವಾಗುತ್ತಿದೆ. ಯುವ ಜನಾಂಗ ಕೆಟ್ಟ ದಾರಿಗೆ ತಲುಪುತ್ತಿರುವುದು ದುರಂತ. ಈ ಬಗ್ಗೆ ಎಚ್ಚೆತ್ತುಕೊಂಡು ನಮ್ಮ ಕ್ಷೇತ್ರವನ್ನು ನಾವು ಹುಡುಕಬೇಕಾಗಿದೆ. ದುಷ್ಟ ಚಟಗಳಿಗೆ ಒಳಗಾಗದೇ ಪ್ರಜ್ಞಾವಂತ ಪ್ರಜೆಯಾಗಬೇಕು ಎಂದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಪುಟ್ಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಠ್ಯೇತರ ಚಟುವಟಿಕೆಗಳ ಸಮಿತಿಗೆ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಉಪನ್ಯಾಸಕ ಸಿದ್ದರಾಮೇ ಗೌಡ ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೃಷ್ಣ, ಐಕ್ಯೂಎಸಿ ಸಂಚಾಲಕಿ ಮಧುಶ್ರೀ, ಸಹ ಸಂಚಾಲಕಿ ಕೆ.ಪಿ. ಕುಸುಮ, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಸ್. ಸುನಿಲ್ ಕುಮಾರ್, ಎನ್.ಎಸ್.ಎಸ್. ಅಧಿಕಾರಿ ಬಿ.ಕೆ. ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕಿ ಪಿ.ಪಿ. ಜಯಂತಿ, ವಾರ್ಷಿಕ ಸಂಚಿಕೆ ಸಂಚಾಲಕಿ ರಶ್ಮಿ, ಆಯಿಶಾ ಸಿದ್ದಿಖಿ, ನಮಿತ, ಸೂರ್ಯಕುಮಾರ್, ಮನೋಜ್ ಕುಮಾರ್, ಮಹಾದೇವ, ರಾಜೇಶ್, ಗಿರೀಶ್, ಸಚಿನ್, ಅಧೀಕ್ಷಕ ಮೋಹನ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net