ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಪ್ರೋತ್ಸಾಹಿಸಬೇಕು

college
Published on

ಕುಶಾಲನಗರ:

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಪ್ರೋತ್ಸಾಹಿಸುವುರೊಂದಿಗೆ ಅವರಲ್ಲಿ ಸಾಮಾಜಿಕ ಜವಾಬ್ದಾರಿ, ಆತ್ಮವಿಶ್ವಾಸ ಮತ್ತು ಸಹಾನುಭೂತಿಯಂತಹ ಗುಣಗಳನ್ನು ಬೆಳೆಸಬೇಕು ಎಂದು ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಹೇಳಿದರು. ಕುಶಾಲನಗರದ ಕನ್ನಡ ಭಾರತಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದವಿ ತರಗತಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಅನೇಕ ಯಶಸ್ವಿ ಶಾಲೆಗಳು ನಾಯಕತ್ವದ ಕಾರ್ಯಕ್ರಮಗಳು ಅಥವಾ ವಿದ್ಯಾರ್ಥಿ ಮಂಡಳಿಗಳನ್ನು ಹೊಂದಿದ್ದು ಅದು ವಿದ್ಯಾರ್ಥಿಗಳಿಗೆ ನಾಯಕತ್ವದ ಪಾತ್ರಗಳನ್ನು ತೆಗೆದುಕೊಳ್ಳಲು ಅವಕಾಶಗಳನ್ನು ಒದಗಿಸುತ್ತದೆ. ನಾಡು-ನುಡಿ, ಸಂಸ್ಕೃತಿ ಬೆಳೆಸಲು, ವಿವಿಧತೆಯಲ್ಲಿ ಏಕತೆ ಸಾರಲು, ಸಾಮಾಜಿಕ ಜವಾಬ್ದಾರಿ ವಹಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಬೆಳೆಸಲು ವಿದ್ಯಾರ್ಥಿ ಸಂಘಗಳು ಸೂಕ್ತ ವೇದಿಕೆ ಒದಗಿಸುತ್ತವೆ. ಸೃಜನಶೀಲತೆಯೊಂದಿಗೆ ಸರ್ವತೋಮುಖ ಬೆಳವಣಿಗೆ ಹಾಗೂ ಉತ್ತಮ ಸಂಸ್ಕಾರ ಬೆಳೆಸಲು ಕಾಲೇಜು ವೇದಿಕೆ ಸಹಕಾರಿಯಾಗಿದೆ ಎಂದರು.

ಕುಶಾಲನಗರದ ಕರಕುಶಲ ಉದ್ಯಮಿ ಜಿ. ಧರ್ಮಪ್ಪ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಕಲಿಕಾ ದಿನಗಳಲ್ಲಿ ಅತೀ ಮುಖ್ಯವಾಗಿ ಸಂಸ್ಕಾರ ಹಾಗೂ ಮಾನವೀಯತೆ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಸಮೂಹ ಮಾದಕ ವಸ್ತುಗಳಿಂದ ದೂರವಿರಬೇಕು. ಹಾಗೆಯೇ ಮೊಬೈಲ್‌ಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸುವ ಮೂಲಕ ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ಹೇಳಿದರು.

ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಯಪಾಲನೆ ಹಾಗೂ ಶಿಸ್ತಿಗೆ ಒತ್ತು ನೀಡಬೇಕು. ಹಾಗೆಯೇ ಕಾಲೇಜು ದಿನಗಳಲ್ಲಿ ಉತ್ತಮ ವ್ಯಕ್ತಿತ್ವದತ್ತ ಹೆಜ್ಜೆ ಇಡಬೇಕು ಎಂದರು.

ಹಿರಿಯ ಉಪನ್ಯಾಸಕ ಪ್ರಸನ್ನ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗಳನ್ನು ಇ. ಲರ್ನಿಂಗ್‌ನಲ್ಲಿ ಹೆಚ್ಚು ಕಲಿಯಲು ಹಾಗೂ ತಿಳಿಯಲು ಸಹಕಾರಿಯಾಗುತ್ತವೆ. ಮೊಬೈಲ್‌ಗಳನ್ನು ಮಿತವಾಗಿ ಹಾಗೂ ಅಗತ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕೆಂದು ಎಂದು ಹೇಳಿದರು.

ಕನ್ನಡ ಭಾರತಿ ಪಿಯು ವಿಭಾಗದ ಪ್ರಾಂಶುಪಾಲ ಶಾಂತಕುಮಾರ್, ಉಪನ್ಯಾಸಕ ಡಾ. ಎನ್. ನಾಗೇಂದ್ರಸ್ವಾಮಿ, ಪದವಿ ವಿಭಾಗದ ಉಪನ್ಯಾಸಕರಾದ ರವೀಂದ್ರ, ಅನಿತಾ, ದಿವ್ಯಾ, ಸಚಿನ್, ದರ್ಶನ್, ಸಿಂಚನಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net