

ಮಡಿಕೇರಿ:
ಗೋಣಿಕೊಪ್ಪಲು ಮತ್ತು ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಶಿಕ್ಷಣ ಸಚಿವರಿಗೆ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಮಾಡಿದರು.
1968ರಲ್ಲಿ ಪ್ರಾರಂಭವಾಗಿ ಸುಮಾರು 55 ವರ್ಷಗಳಿಂದ ಕಾವೇರಿ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪ, ಕಾವೇರಿ ಪದವಿಪೂರ್ವ ಕಾಲೇಜು ವಿರಾಜ ಪೇಟೆಯಲ್ಲಿ ಎರಡು ಸಂಸ್ಥೆಗಳು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣ ಸಾಧನೆ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯಲ್ಲಿ ಒಳ್ಳೆಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 20 ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಪ್ರಥಮ ದರ್ಜೆ ಹಾಗೂ ಪಿಯು ಕಾಲೇಜುಗಳನ್ನು ಬೇರ್ಪಡಿಸಿದಾಗ ಪಿಯು ಕಾಲೇಜು ಸಿಬ್ಬಂದಿಪೂರ್ಣಪ್ರಮಾಣದಲ್ಲಿ ಅನುದಾನಕ್ಕೆ ಒಳಪಡಬೇಕಾಗಿತ್ತು. ಆದರೆ ಆಗಲಿಲ್ಲ.
ಹಾಗಾಗಿ ಈ ಎರಡು ಕಾಲೇಜು ಸಂಸ್ಥೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆರ್ಥಿಕ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಅನುದಾನಕ್ಕೆ ಒಳಪಡಿಸಲು ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾವೇರಿ ಕಾಲೇಜು ಅಧ್ಯಕ್ಷ ಸುವರ್ಣ ಮುತ್ತಣ್ಣ, ಕೆ.ಜಿ. ಗೋಪಾಲಕೃಷ್ಣ ಭಟ್, ಡಾ. ಅಕ್ರಂ, ಚೇತನ್ ಚಿಣ್ಣಪ್ಪ ಇದ್ದರು.