

ಕುಶಾಲನಗರ:
ಜಿಲ್ಲೆಯಲ್ಲಿ ಇರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲೆ ಕಡಿಮೆ ಆಗುತ್ತಿರುವ ಬಗ್ಗೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ರೇಖಾ ಗಣಪತಿ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕೊಡಗಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಪ್ರಾರಂಭಿಸಿರುವುದು ಶ್ಲಾಘನೀಯ. ಭವಿಷ್ಯದ ಉದ್ಯೋಗಕ್ಕಾಗಿ ಇದು ವಿದ್ಯಾರ್ಥಿಗಳಿಗೆ ಬಹು ಅನುಕೂಲವಾಗಿದೆ. ಯಾರೂ ಕೂಡ ಜೀವನ ದಾರಿಯ ಬಗ್ಗೆ ನಿರ್ಲಕ್ಷ್ಯ ವಹಿಸದೇ ತಾಳ್ಮೆಯಿಂದ, ಆಸಕ್ತಿಯಿಂದ ತರಬೇತಿಯಲ್ಲಿ ಹಾಜರಾದರೇ ಭವಿಷ್ಯ ಉಜ್ವಲವಾಗಲಿದೆ. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದರಲ್ಲದೆ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕ ಡಾ.ಪುಟ್ಟರಾಜು ಮಾತನಾಡಿ, ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ಗಂಟೆಗಳ ವಿಶೇಷ ತರಗತಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ತರಗತಿಗಳನ್ನಾಗಿ ನಡೆಸಲಾಗುತ್ತದೆ. ಈ ತರಗತಿಗಳಲ್ಲಿ ಸಾಮಾನ್ಯ ಜ್ಞಾನ, ಮಾನಸಿಕ ಯೋಗ್ಯತೆ, ತಾರ್ಕಿಕ ವಿಷಯಗಳಲ್ಲಿ ವಿಶೇಷ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಸಾಮಾನ್ಯ ಕನ್ನಡ, ಇಂಗ್ಲೀಷ್ ಸ್ಪೋಕನ್ ತರಗತಿಗಳನ್ನು ನಡೆಸಲಾಗುತ್ತದೆ. ಉದ್ಯೋಗ ಮಾಹಿತಿಗಳನ್ನು ನೀಡಲಾಗುತ್ತದೆ. ಸಂಯೋಜನಾ ಮಾದರಿಯ ತರಗತಿಗಳನ್ನು ಪ್ರಾರಂಭಿಸಿ ವರ್ಷದಲ್ಲಿ ಕನಿಷ್ಠ ಐದು ವಿದ್ಯಾರ್ಥಿಗಳನ್ನು ಉನ್ನತ ಹುದ್ದೆಗಳಿಗೆ ಸಿದ್ದಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಮಾಹಿತಿ ಕೇಂದ್ರದ ಅಧಿಕಾರಿ ಡಾ.ದೀಪಾ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೇಗೆ ಸಿದ್ದರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು.
ಸಹ ಪ್ರಾಧ್ಯಪಕ ರಮೇಶ್ಚಂದ್ರ, ಕುಮಾರ್, ಸುಧಾಕರ್, ಕುಸುಮ, ರಶ್ಮಿ, ಆಯಿಶಾ ಸಿದ್ದಿಕಿ, ಪಿ.ಪಿ.ಜಯಂತಿ, ವಂದನಾ, ಉಪನ್ಯಾಕರಾದ ಮನೋಜ್ ಕುಮಾರ್, ಗಿರೀಶ್, ಸಿದ್ರರಾಮೇ ಗೌಡ, ಸಿದ್ದಪ್ಪಾಜಿ ಹಾಗೂ ವಿದ್ಯಾರ್ಥಿಗಳು ಇದ್ದರು.