

ಕೊಳ್ಳೇಗಾಲ: ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೋಮವಾರ ಸ್ಥಳೀಯ ಅಧಿಕಾರಿಗಳ ಜತೆ ಪಟ್ಟಣದ ಪ್ರದಕ್ಷಿಣೆ ಹಾಕಿದರು.
ಇಲ್ಲಿನ ಬಸ್ ಟರ್ಮಿನಲ್, ಡಾ.ರಾಜ್‌ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಪೀಸ್ ಪಾಕ್ ರಸ್ತೆ, ಚಿಲ್ಡ್ರನ್ಸ್ ಪಾರ್ಕ್, ಆರ್‌ಒ ಪ್ಲಾಂಟ್ ನಿರ್ವಹಣೆ, ಸಾರ್ವಜನಿಕರ ಶೌಚಗೃಹಗಳು, ಇಂದಿರಾ ಕ್ಯಾಂಟಿನ್ ಹಾಗೂ ಚಿಕ್ಕರಂಗನಾಥ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಲ್ಡ್ರನ್ ಪಾರ್ಕ್‌ನಲ್ಲಿ ಮಕ್ಕಳ ಮನರಂಜನೆಗೆ ಅಳವಡಿಸಿರುವ ಆಟಿಕೆಗಳು ಮುರಿದಿರುವುದನ್ನು ವೀಕ್ಷಿಸಿದರು. ಚಿಕ್ಕರಂಗನಾಥ ಕೆರೆಗೆ ಭೇಟಿ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿ ಬಗ್ಗೆ ಪರಿಶೀಲಿಸಿದರು. ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಇಡ್ಲಿ ಹಾಗೂ ಪುಳಿಯೊಗರೆ ಸವಿದು ಆಕ್ಷೇಪ ವ್ಯಪ್ತಡಿಸಿದರು. ತಿಂಡಿಯನ್ನು ಇನ್ನೂ ಚೆನ್ನಾಗಿ ಮಾಡಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.
ಬಸ್ ಟರ್ಮಿನಲ್ ಸ್ವಚ್ಛತೆ, ಪಾರ್ಕಿಂಗ್ ಸ್ಥಳವನ್ನು ವೀಕ್ಷಿಸಿದ ಡಿಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಾಹನ ನಿಲುಗಡೆಗೆ ಅವಕಾಶ ಮಾಡಬೇಕೆಂದು ತಾಕೀತು ಮಾಡಿದರು.
ಉಪವಿಭಾಗಾಧಿಕಾರಿ ಪೌರಾಯುಕ್ತ ಮಹೇಶ್, ತಹಸೀಲ್ದಾರ್ ಮಂಜುಳಾ. ಹೆಲ್ತ್ ಇನ್ಸ್‌ಪೆಕ್ಟರ್ ಚೇತನ್, ಕಬಿನಿ ಎಇಇ ರಮೇಶ್, ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ಮತ್ತಿತರಿದ್ದರು.