![3sri-2[1]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2024%2F09%2F3sri-21.png?w=480&auto=format%2Ccompress&fit=max)
![3sri-2[1]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2024%2F09%2F3sri-21.png?w=480&auto=format%2Ccompress&fit=max)
ಶೃಂಗೇರಿ: 2002ರಲ್ಲಿ ರಾಜಕೀಯ ಜಿದ್ದಿಗೆ ಬಿದ್ದು ಅಂದಿನ ಜಿಲ್ಲಾಧಿಕಾರಿ ಗೋಪಾಲಕಷ್ಣ ಅವರು 1,38,000 ಎಕರೆ ಜಾಗವನ್ನು ಅರಣ್ಯ ಇಲಾಖೆ ಸುಪರ್ದಿಗೆ ವಹಿಸುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಮನೆಬಾಗಿಲಿಗೆ ಬರುವ ಪರಿಸ್ಥಿತಿಗೆ ಅನುವು ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ತಿಳಿಸಿದರು.
ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಮಂಗಳವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕಚೇರಿಯಲ್ಲಿ ಕುಳಿತು ಸೊಪ್ಪಿನಬೆಟ್ಟ, ಗೋಮಾಳ ಪ್ರದೇಶಗಳನ್ನು ಸೆಕ್ಸನ್ 4.1ಗೆ ಸೇರಿಸಿ ಜನಸಾಮಾನ್ಯರು ಹಾಗೂ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಚಿವರು ಹೇಳಿಕೆ ನೀಡಿದ ತಕ್ಷಣ ಮನೆಗೆ ನುಗ್ಗುವ ಇಲಾಖೆ ಸಿಬ್ಬಂದಿ ಇಲ್ಲಿನವರು ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಬೇಕು. 1980ರಲ್ಲಿ ಒತ್ತುವರಿ ಪ್ರಕರಣ ಇರಲಿಲ್ಲ. ಹೊರ ದೇಶದಿಂದ ಬಂದ ಹಣದಿಂದ ಅಕೇಶಿಯಾ ನೆಟ್ಟು ಅರಣ್ಯೀಕರಣ ಮಾಡಿದ ಇಲಾಖೆಗೆ ಪರಿಸರದ ಕಾಳಜಿ ಇರಬೇಕು ಎಂದು ದೂರಿದರು.
ಸಮಿತಿ ಗೌರವಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಉಪಾಧ್ಯಕ್ಷ ಮಾರನಕೊಡಿಗೆ ನಾಗೇಶ್, ವೆಂಕಟೇಶ್, ಕೋಶಾಧ್ಯಕ್ಷ ನಾಗೇಂದ್ರ, ಪದಾಧಿಕಾರಿಗಳಾದ ತನಿಕೋಡು ಮಂಜುನಾಥ್, ಕೃಷ್ಣಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್, ತಾಲೂಕು ರೈತ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಮೇಗಳಬೈಲು, ಬಿಜೆಪಿ ಮಂಡಲ ಕಾರ್ಯದರ್ಶಿ ನೂತನ್‌ಕುಮಾರ್ ಹಾಜರಿದ್ದರು.