ಆಹಾರ ನಿರೀಕ್ಷಕರ ಲಾಗಿನ್ ಒದಗಿಸುವಂತೆ ಡಿಸಿಗೆ ತಹಸೀಲ್ದಾರ್ ಪ್ರಸ್ತಾವನೆ

LETTER KNK
ಆಹಾರ ನಿರೀಕ್ಷಕರ ಶಾಖೆಯನ್ನು ಆರಂಭಿಸುವಂತೆ ಡಿಸಿಗೆ ಬರೆಯಲಾದ ಪತ್ರ.
Published on

ಕನಕಗಿರಿ: ತಾಲೂಕು ಕೇಂದ್ರವಾಗಿ ಆರು ವರ್ಷಗಳಾಗಿದ್ದರೂ ಪಟ್ಟಣದಲ್ಲಿ ಇದುವರೆಗೂ ಆಹಾರ ಮತ್ತು ನಾಗರಿಕ ಸೌಲಭ್ಯದ ಕಚೇರಿ ಆರಂಭಗೊಂಡಿಲ್ಲ. ಇದರಿಂದ ಇಲ್ಲಿನ ಜನತೆ ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡಿರುವ ನೂತನ ತಹಸೀಲ್ದಾರ್ ವಿಶ್ವನಾಥ ಮುರುಡಿ ಅವರು, ಆಹಾರ ನಿರೀಕ್ಷಕರ ಲಾಗಿನ್ ಒದಗಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಪಡಿತರ ಚೀಟಿ ಅವಶ್ಯವಿದೆ. ಆದರೆ, ಪಡಿತರ ಚೀಟಿಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹಾಗೂ ನೂತನ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಲು ಆಗುವ ಸಮಸ್ಯೆಗಳಿಗೆ 22 ಕಿ.ಮೀ ದೂರದ ಗಂಗಾವತಿ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಕನಕಗಿರಿ ತಾಲೂಕಿನ 64 ಗ್ರಾಮಗಳ ಜನರದಾಗಿದೆ.

ಒಮ್ಮೆ ಗಂಗಾವತಿಗೆ ಹೋಗಿಬರಬೇಕೆಂದರೆ ಅಂದಾಜು 200 ರೂ. ಬೇಕಾಗುತ್ತದೆ. ಅದು ಒಮ್ಮೆಲೇ ಆಗುವ ಕೆಲಸವೂ ಅಲ್ಲ. ಪಡಿತರ ಚೀಟಿಗಳ ಪರಿಶೀಲನೆ ನಡೆಸಲು ಹಲವು ಬಾರಿ ಭೇಟಿ ನೀಡಬೇಕಾಗುತ್ತದೆ. ಇದು ಬಡವರಿಗೆ ಹೊರೆಯಾಗುತ್ತದೆ. ಈ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಕನಕಗಿರಿಯ ತಹಸೀಲ್ದಾರ್ ಕಚೇರಿಯಲ್ಲಿನ ಆಹಾರ ಶಾಖೆಗೆ ಆಹಾರ ನಿರೀಕ್ಷಕರ ಲಾಗಿನ್ ನೀಡುವುದಲ್ಲದೆ, ಖಾಲಿ ಇರುವ ಆಹಾರ ನಿರೀಕ್ಷಕರ ಹುದ್ದೆ ಮಂಜೂರು, ಕಂಪ್ಯೂಟರ್ ಆಪರೇಟರ್, ಗಣಕಯಂತ್ರ, ಬಯೋಮೆಟ್ರಿಕ್ ನೀಡುವಂತೆ ತಹಸೀಲ್ದಾರ್ ಕಚೇರಿಯಿಂದ ಆ.12ರಂದು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗಿದೆ.

ತಾಲೂಕು ಆದ ಬಳಿಕ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಕಳೆದ ಒಂದು ತಿಂಗಳ ಹಿಂದೆ ಆಹಾರ ನಿರೀಕ್ಷಕರ ಹುದ್ದೆ ಮಂಜೂರು ಮಾಡಲಾಗಿದೆ. ಆದರೆ, ಅಧಿಕಾರಿ ಗೈರು ಹಾಜರಾಗಿದ್ದು, ಸಾರ್ವಜನಿಕರಿಗೆ ತೊಂದರೆಗಳಾಗುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕ್ಷೇತ್ರದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ತಾಲೂಕು ಕೇಂದ್ರವಾಗಲು ಶ್ರಮಿಸಿದ ಸಚಿವ ಶಿವರಾಜ್ ತಂಗಡಗಿ ಸ್ವಕ್ಷೇತ್ರದಲ್ಲಿಯೇ ಆಹಾರ ಇಲಾಖೆ ಆರಂಭಗೊಳ್ಳಲು ಕ್ರಮ ವಹಿಸಬೇಕೆಂದು ಸಾರ್ವಜನಿಕರ ಒತ್ತಾಯವಿದೆ.

ಕನಕಗಿರಿ ತಾಲೂಕಿನಲ್ಲಿ ಪಡಿತರ ಚೀಟಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಲೆದಾಡಬೇಕು. ಇಲ್ಲಿನ ತಹಸಿಲ್ ಕಚೇರಿಯಲ್ಲಿಯೇ ಆಹಾರ ಇಲಾಖೆಗೆ ನಿರೀಕ್ಷಕರ ಜತೆಗೆ ಮೂಲ ಸೌಲಭ್ಯ ಒದಗಿಸಲು ಕೋರಿ ಪತ್ರ ಬರೆಯಲಾಗಿದೆ.ವಿಶ್ವನಾಥ ಮುರುಡಿ, ತಹಸೀಲ್ದಾರ್, ಕನಕಗಿರಿ.

ಈ ಸಮಸ್ಯೆ ಬಗ್ಗೆ ಮಾಹಿತಿಯಿದ್ದು, ಆಹಾರ ಇಲಾಖೆಯನ್ನು ತೆರೆಯಲು ಕ್ರಮ ವಹಿಸಲಾಗಿದೆ. ಈಗಾಗಲೇ ತಹಸೀಲ್ದಾರ್‌ಗೆ ಪತ್ರ ಬರೆಯಲು ಸೂಚಿಸಲಾಗಿದೆ. ಶೀಘ್ರವೇ ಆಹಾರ ನಿರೀಕ್ಷಕರ ಕಚೇರಿ ಆರಂಭಗೊಳ್ಳಲಿದೆ.ಶಿವರಾಜ ತಂಗಡಗಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net