ಜೈಲಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ

dj mlk manavi
Published on

ಮೊಳಕಾಲ್ಮೂರು: ಜೀವನದಲ್ಲಿ ಮಾಡಿದ ತಪ್ಪಿಗೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಂದ ಕಾರಗೃಹ ಸಿಬ್ಬಂದಿ ಹಣ ಸುಲಿಗೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮಧುಗಿರಿ ಕಾರಾಗೃಹದ ಅಧೀಕ್ಷಕ ದೇವೇಂದ್ರ ಆರ್.ಕೋಣೆ ಅವರು ಕೈದಿಗಳ ನೋಡಲು ಬಂದ ಸಂಬಂಧಿಕರಿಂದ ಲಂಚ ಪಡೆಯುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಇದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹದ್ದಾಗಿದೆ. ಇಂತಹ ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಕೈದಿಗಳು ಮಾಡಿದ ತಪ್ಪನ್ನು ತಿದ್ದುಕೊಂಡು ಉತ್ತಮ ನಾಗರಿಕರಾಗಿ ಜೀವಿಸಲು ಪುನರ್ವಸತಿ ಕೇಂದ್ರವಾಗಿರಬೇಕು. ಆದರೆ ಅಲ್ಲಿನ ಸಿಬ್ಬಂದಿಗಳ ವರ್ತನೆಯಿಂದ ಶಿಕ್ಷಿತರು, ಮತ್ತಷ್ಟು ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ವಿಪರ್ಯಾಸ ಎನಿಸಿದೆ.

ಚಿತ್ರದುರ್ಗ ಕಾರಾಗೃಹದಲ್ಲಿ ಸಿಬ್ಬಂದಿಗಳ ಲಂಚಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದನ್ನು ಖಂಡಿಸಿದ ಅಪರಾಧಿಗಳಿಗೆ ಚಿತ್ರಹಿಂಸೆ ನೀಡಲಾಗಿದೆ.

ಯಾಲಯ ವಿಧಿಸುವ ಶಿಕ್ಷೆಗೂ ಮಿಗಿಲಾದ ಹಿಂಸೆ, ನರಕಯಾತನೆ ಕಾರಾಗೃಹಗಳಲ್ಲಿ ಸಿಬ್ಬಂದಿಗಳು ನೀಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಬದ್ಧ ತನಿಖೆಗೆ ಸಮಿತಿ ನೇಮಿಸಬೇಕೆಂದರು.

ಜೈಲಿನಲ್ಲಿ ಕೈದಿಗಳಿಗೆ ಕಳಪೆ ಊಟ, ಗಲೀಜು ಸ್ಥಳದಲ್ಲಿ ಇರಿಸಲಾಗಿದೆ. ಸೊಳ್ಳೆಗಳ ಉಪಟಳದ ನಡುವೆ ಆರೋಗ್ಯ ಸುರಕ್ಷತೆ ಮರಿಚೀಕೆಯಾಗಿದೆ.

ಪ್ರಭಾವಿತರಿಗೆ ಮಾತ್ರ ಒಳ್ಳೆಯ ಉಪಚಾರ ನೀಡಲಾಗುತ್ತಿದೆ. ಇದನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ತಾಲೂಕು ಅಧ್ಯಕ್ಷ ಮರ‌್ಲಹಳ್ಳಿ ರವಿಕುಮಾರ, ಕಾರ್ಯದರ್ಶಿ ಮಂಜುನಾಥ, ಎಚ್.ಟಿ.ಚಂದ್ರಣ್ಣ, ಡಿ.ಬಿ.ಕೃಷ್ಣಮೂರ್ತಿ, ಪಿ.ಟಿ.ಹಟ್ಟಿ ನಿಂಗಣ್ಣ, ಕನಕ ಶಿವಮೂರ್ತಿ, ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net