ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸೋಣ

Collector, T. Bhubalan, Mission Indradhanusha 5.0, Vaccination Campaign, Mortality,
ವಿಜಯಪುರದ ಶಾಂತಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಮಿಷನ್ ಇಂದ್ರಧನುಷ ಅಭಿಯಾನ’ಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿದರು. ಡಾ. ರಾಜಕುಮಾರ ಯರಗಲ್, ಡಾ. ಮುಕುಂದ ಗಲಗಲಿ, ಡಾ. ಕೆ.ಡಿ. ಗುಂಡಬಾವಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯ 0-2 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡುವ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದ್ದು, ಮಾರಕ ರೋಗಗಳಿಂದ ರಕ್ಷಿಸಲು ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸ್ಥಳೀಯ ಶಾಂತಿ ನಗರದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಿಷನ್ ಇಂದ್ರಧನುಷ ಅಭಿಯಾನ’ಕ್ಕೆ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಲಸಿಕೆಯಿಂದ ವಂಚಿತರಾದ 0-2 ಒಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಈ ವಿಶೇಷ ಅಭಿಯಾನದಲ್ಲಿ ಕಡ್ಡಾಯವಾಗಿ ಲಸಿಕೆ ನೀಡಬೇಕು. 12 ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಎಲ್ಲ ತಾಯಿಂದಿರು ಮತ್ತು ಪಾಲಕರು ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನ ಕಾರ್ಯಕ್ರಮವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತದೆ. ಹುಟ್ಟಿದ ಶಿಶುವಿನಿಂದ 2 ವರ್ಷದೊಳಗಿನ ಮಕ್ಕಳಿಗೆ ದೇಹದಲ್ಲಿ ಉಂಟಾಗುವ ವಿವಿಧ ಕಾಯಿಲೆಗಳಿಂದ ರಕ್ಷಣೆ ಒದಗಿಸಲು ಲಸಿಕೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಒಟ್ಟು 11 ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಆದರೆ ನಿಗದಿತ ಅಂತರದಲ್ಲಿ ನೀಡುವ 11 ಲಸಿಕೆಗಳ ಪೈಕಿ ಹಲವು ಮಕ್ಕಳು ಒಂದಿಷ್ಟು ಲಸಿಕೆ ಪಡೆದುಕೊಂಡಿರುವುದಿಲ್ಲ. ಅಂತಹ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ಜಿಲ್ಲಾ ಮತ್ತು ತಾಲೂಕುಗಳಲ್ಲಿ ಮಿಷನ್ ಇಂದ್ರಧನುಷ್ ಅಭಿಯಾನ ಹಮ್ಮಿಕೊಂಡಿದ್ದು, ಒಟ್ಟು 3 ಸುತ್ತಿನಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಮೊದಲನೇ ಸುತ್ತು ಆ.7 ರಿಂದ 12ರ ವರೆಗೆ ಎರಡನೇ ಸುತ್ತು ಸೆ.11 ರಿಂದ 16 ಹಾಗೂ ಮೂರನೇ ಸುತ್ತು ಅ. 9 ರಿಂದ 14 ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 0-2 ವರ್ಷದ ಒಟ್ಟು 6676 ಮಕ್ಕಳನ್ನು ಹಾಗೂ 1600 ಗರ್ಭಿಣಿಯರನ್ನು ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಬೇರೆ ಬೇರೆ ಕಾರಣಗಳಿಂದ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆ ಪಡೆಯದೆ ಬಿಟ್ಟು ಹೋಗಿರುತ್ತಾರೆ. ತಿಳಿವಳಿಕೆ ಇಲ್ಲದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಕ್ಕಳು ಲಸಿಕೆಯಿಂದ ವಂಚಿತರಾಗಿರುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ನಗರ, ಗ್ರಾಮೀಣ ಸೇರಿದಂತೆ ಜಿಲ್ಲೆಯ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಯರಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧಿಕಾರಿಗಳಾದ ಡಾ. ಮುಕುಂದ ಗಲಗಲಿ, ಡಾ. ಕೆ.ಡಿ. ಗುಂಡಬಾವಡಿ, ಡಾ. ರಾಜೇಶ್ವರಿ ಗೊಲಗೇರಿ, ಡಾ. ಸಂಪತ ಗುಣಾರಿ, ಡಾ. ಜೈಬುನಿಸಾ ಬೀಳಗಿ, ಡಾ. ಕವಿತಾ ದೊಡಮನಿ, ಡಾ.ಪಿ.ಎ. ಹಿಟ್ಟನಳ್ಳಿ, ಡಾ.ಕೆ.ಕೆ. ಚವ್ಹಾಣ, ದೀಪಾಕ್ಷಿ ಜಾನಕಿ, ಎಸ್.ಸಿ. ಮ್ಯಾಗೇರಿ, ಡಾ. ಬಾಲಕೃಷ್ಣ, ಜಿ.ಎಂ. ಕೊಲೂರ, ಬಿ.ಪಿ. ಜಕ್ಕನಗೌಡರ, ಮಹಾದೇವ ನಿಲಂಗಿ ಮತ್ತಿತರರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್. ಬಾಗವಾನ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net