ಶೇ.20 ಹೆಚ್ಚುವರಿ ಮತಯಂತ್ರ ಮೀಸಲು

BLY-1-3
ಬಳ್ಳಾರಿ ನಗರದ ನೂತನ ಜಿಲ್ಲಾಡಳಿತ ಕಚೇರಿ ಆವರಣದ ಪಕ್ಕದಲ್ಲಿರುವ ಚುನಾವಣೆ ಶಾಖೆ ಕಚೇರಿಯಲ್ಲಿ ಮತಯಂತ್ರದ ಕೊಠಡಿಯನ್ನು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ ಮತ್ತಿತರರಿದ್ದರು.
Published on

ಬಳ್ಳಾರಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಪಾರದರ್ಶಕ ಮತ್ತು ವಿದ್ಯುನ್ಮಾನ ಮತಯಂತ್ರಗಳಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಚುನಾವಣೆ ನಡೆಸಲು ಮೊದಲನೇ ಹಂತದ ರ‌್ಯಾಂಡಮೈಜೇಷನ್‌ನ್ನು ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ನಡೆಸಿದ್ದು, ಶೇ.20 ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಯಂತ್ರಗಳು ಮತ್ತು ಶೇ.30 ವಿವಿಪ್ಯಾಟ್‌ಗಳನ್ನು ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹೇಳಿದರು.

ನೂತನ ಜಿಲ್ಲಾಡಳಿತ ಕಚೇರಿ ಆವರಣದ ಪಕ್ಕದಲ್ಲಿರುವ ಚುನಾವಣೆ ಶಾಖೆ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮಕ್ಷಮದಲ್ಲಿ ಹಮ್ಮಿಕೊಂಡಿದ್ದ ಮೊದಲನೇ ಹಂತದ ಮತಯಂತ್ರಗಳ ರ‌್ಯಾಂಡಮೈಜೇಷನ್ ಸಭೆಯಲ್ಲಿ ಮಾತನಾಡಿದರು.

ಬಳ್ಳಾರಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, 1191 ಚುನಾವಣಾ ಮತಗಟ್ಟೆಗಳಿವೆ. ಮತಗಟ್ಟೆಗಳಿಗೆ ಅವಶ್ಯವಿರುವ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳು ಸರಬರಾಜು ಆಗಿವೆ. ಅವುಗಳನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ತಂತ್ರಜ್ಞರಿಂದ ಮತ್ತು ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಈಗಾಗಲೇ ಪ್ರಥಮ ಹಂತದ ಪರಿಶೀಲನಾ ಕಾರ್ಯವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಅದರಲ್ಲಿ 2441 (ಬ್ಯಾಲೆಟ್ ಯುನಿಟ್), 1712 (ಕಂಟೋಲ್ ಯುನಿಟ್) ಮತ್ತು 1855 (ವಿ.ವಿ.ಪ್ಯಾಟ್)ಗಳು ಚುನಾವಣೆಗೆ ಸಿದ್ಧಗೊಂಡಿವೆ. 4 (ಬ್ಯಾಲೆಟ್ ಯುನಿಟ್), 2 (ಕಂಟ್ರೋಲ್ ಯುನಿಟ್) ಮತ್ತು 2 (ವಿ.ವಿ.ಪ್ಯಾಟ್)ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಹಿಂದಿರುಗಿಸಲಾಗಿದೆ ಎಂದರು.

ಈಗಾಗಲೇ ಪ್ರಥಮ ಹಂತದಲ್ಲಿ ಶೇ.20 ಅಂದರೆ 1431 ಬ್ಯಾಲೆಟ್ ಯುನಿಟ್, 1431 ಕಂಟ್ರೋಲ್ ಯುನಿಟ್, ಶೇ.30 ಅಂದರೆ 1550 ವಿವಿ ಪ್ಯಾಟ್‌ಗಳನ್ನು ಹೆಚ್ಚುವರಿಯಾಗಿ ಆಯಾ ಕ್ಷೇತ್ರಗಳಿಗೆ ತೆಗೆದಿಟ್ಟು ಒದಗಿಸಲಾಗುತ್ತದೆ. ಇವುಗಳನ್ನು ಮತದಾನದ ಸಂದರ್ಭದಲ್ಲಿ ಮತಯಂತ್ರಗಳಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಇವುಗಳನ್ನು ಬಳಸಿಕೊಳ್ಳಲು ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ ಹಾಗೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಧ್ವನಿವರ್ಧಕ ಬಳಕೆಗೆ ನಿರ್ಬಂಧ: ಚುನಾವಣೆ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರದಲ್ಲಿ ಧ್ವನಿ ವರ್ಧಕಗಳು, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು ಮತ್ತು ಸಂಗೀತ ವಾದ್ಯಗಳನ್ನು ಧ್ವನಿ ವರ್ಧಕಗಳ ಮೂಲಕ ಬಳಸುವುದನ್ನು ನಿಷೇಧಿಸಿ ಡಿಸಿ ಮಾಲಪಾಟಿ ಆದೇಶಿದರು.

ಲೌಡ್ ಸ್ಪೀಕರ್‌ಗಳು, ಧ್ವನಿ ವರ್ಧಕಗಳನ್ನು ಬಳಸಲು 15 ದಿನಗಳೊಳಗಾಗಿ ಆಯಾ ವ್ಯಾಪ್ತಿಯ ನಿಗದಿಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯಬೇಕು. ಯಾವುದೇ ಪರವಾನಗಿ ಇಲ್ಲದೆ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಅಂತಹ ವಾಹನ ಮತ್ತು ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಯಾವುದೇ ಧ್ವನಿವರ್ಧಕ ಬಳಸುವ ವಾಹನ ಮತ್ತು ಯಾವುದೇ ಪ್ರದೇಶದಲ್ಲಿ ಪಟಾಕಿ ಸಿಡಿಸುವ ಉದ್ದೇಶವಿದ್ದಲ್ಲಿ ಅನುಮತಿ ಕಡ್ಡಾಯ. ಈ ಬಗ್ಗೆ ಸ್ಥಳೀಯ, ಆಯಾ ವ್ಯಾಪ್ತಿ ಪೊಲೀಸ್ ಠಾಣೆ ಮತ್ತು ಚುನಾವಣಾಧಿಕಾರಿಗಳಿಗೆ ಪರವಾನಗಿ ಪ್ರದರ್ಶಿಸಬೇಕಾಗುತ್ತದೆ ಎಂದು ತಿಳಿಸಿದರು.

ಪರವಾನಗಿ ಪಡೆಯುವ ವೇಳೆ ಸಂಬಂಧಿಸಿದವರ ಗುರುತಿನ ಪತ್ರ ಮತ್ತು ವಾಹನಗಳ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಎಲ್ಲ ವಿಧವಾದ ಧ್ವನಿವರ್ಧಕಗಳ ಬಳಕೆ ಮತದಾನ ಮುಕ್ತಾಯಕ್ಕೆ 48 ಗಂಟೆಗಳ ಮೊದಲು ಕೊನೆಗೊಳ್ಳಲಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ತ್ವರಿತಗತಿಯಲ್ಲಿ ಸಮಸ್ಯೆ ಇತ್ಯರ್ಥಗೊಳಿಸಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರು ಚುನಾವಣಾ ಗುರುತಿನ ಚೀಟಿಗೆ ಸಂಬಂಧಿಸಿ ಹೊಸದಾಗಿ ನೋಂದಣಿ, ತಿದ್ದುಪಡಿಗೆ ಮತ್ತು ಸ್ಥಳ ಬದಲಾವಣೆಗೆ ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳು ಆಯಾ ಕ್ಷೇತ್ರ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಮುದ್ರಣಗೊಂಡಿರುವ ಹೊಸ ಮತದಾರರ ಚುನಾವಣಾ ಗುರುತಿನ ಚೀಟಿಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಮತದಾರರ ವಿಳಾಸಕ್ಕೆ ಶೀಘ್ರದಲ್ಲಿ ಅಂಚೆ ಮೂಲಕ ತಲುಪಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತಯಂತ್ರಗಳನ್ನು ಸಂರಕ್ಷಿತವಾಗಿಡಲು ಭದ್ರತಾ ಕೊಠಡಿ ಸಿದ್ಧತೆ ಮಾಡಿಕೊಳ್ಳಬೇಕು. ಇನ್ನು ಕೆಲವೇ ದಿನಗಳಲ್ಲಿ ಆಯಾ ಕ್ಷೇತ್ರಕ್ಕೆ ಜಿಲ್ಲಾ ಕೇಂದ್ರದಿಂದ ಮತಯಂತ್ರಗಳನ್ನು ಸಾಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಭದ್ರತಾ ಕೊಠಡಿಯಲ್ಲಿರುವ ಮತಯಂತ್ರಗಳಿಗೆ ಭದ್ರತೆಯಾಗಿ ಪೊಲೀಸ್ ಸಿಬ್ಬಂದಿಯನ್ನು 24*7 ನಿಯೋಜಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಮತದಾನ ಜಾಗೃತಿ ಅಂಗವಾಗಿ ಸೈಕಲ್ ಜಾಥಾ: ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರ ಅಂಗವಾಗಿ ಮತದಾನದ ಜಾಗೃತಿ ಮೂಡಿಸಲು ಸೈಕಲ್ ಜಾಥಾವನ್ನು ಏ.2 ರಂದು ಬೆಳಗ್ಗೆ 7ಕ್ಕೆ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಿಂದ ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದರು. ಮತದಾನ ಜಾಗೃತಿ ಮೂಡಿಸುವ ಸೈಕಲ್ ಜಾಥಾವು ಐಟಿಐ ಕಾಲೇಜು ಮೈದಾನದಿಂದ ಆರಂಭವಾಗಿ ರೇಡಿಯೋ ಪಾರ್ಕ್‌ನಿಂದ ಸಂತ ಜೋಸೆಫರ ಪ್ರೌಢಶಾಲೆ ಮೂಲಕ ಬೆಳಗಲ್ ಕ್ರಾಸ್‌ನ ಮಾರ್ಗವಾಗಿ ಕೌಲ್‌ಬಜಾರ್ ಪೊಲೀಸ್ ಠಾಣೆ, ಮೊದಲ ರೈಲ್ವೇ ಗೇಟ್ ಮೂಲಕ ಜೋಳದರಾಶಿ ರಂಗಮಂದಿರದಿಂದ ಮೋತಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net