

ಕೊಪ್ಪಳ: ಬರದ ಛಾಯೆ ಹಿನ್ನೆಲೆಯಲ್ಲಿ ಅಂದಾಜು ಬೆಳೆ ನಷ್ಟ ಸಮೀಕ್ಷೆಗೆ ಸರ್ಕಾರ ಸೂಚಿಸಿದ್ದು, ಜಿಲ್ಲೆಯಲ್ಲಿ ಸಮೀಕ್ಷೆ ಕರಾರುವಕ್ಕಾಗಿ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬರ ನಿರ್ವಹಣೆ ಕುರಿತು ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆ ನಡೆಸಬೇಕಿದೆ. ಇಲಾಖೆಯಿಂದ ತಯಾರಿಸಿದ ಮೊಬೈಲ್ ಆ್ಯಪ್ ಮತ್ತು ಅಪ್ಲಿಕೇಷನ್ ಮೂಲಕ ಮಾಹಿತಿ ರವಾನಿಸಬೇಕಿದೆ ಎಂದರು.
ಆಯಾ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಮೇಲ್ವಿಚಾರಣೆ ನಡೆಸಿ. ಮಾಸ್ಟರ್ ಟ್ರೈನರ್‌ಗಳು ಅಪ್ಲಿಕೇಷನ್ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ತರಬೇತಿ ನೀಡಿ. ಆ.28ರಿಂದ 31ವರೆಗೆ ಸಮೀಕ್ಷೆ ನಡೆಸಿ ವರದಿ ಕಳಿಸಬೇಕು. ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ (ಗ್ರೌಂಡ್ ಟ್ರೂಥಿಂಗ್) ಪ್ರಕ್ರಿಯೆ ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು. ತಾಲೂಕುವಾರು ಸಮೀಕ್ಷಾ ತಂಡಗಳನ್ನು ರಚಿಸಿ ತಂಡದ ಕಾರ್ಯವೈಖರಿ ಬಗ್ಗೆ ನಿಗಾವಹಿಸುವಂತೆ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ಗಂಗಾವತಿ ತಾಲೂಕಿನಲ್ಲಿ ಶೇ.20, ಕೊಪ್ಪಳ ಶೇ.6, ಕುಷ್ಟಗಿ ಶೇ.46, ಯಲಬುರ್ಗಾ ಶೇ.20, ಕಾರಟಗಿ ಶೇ.30, ಕುಕನೂರು ಶೇ.14, ಕನಕಗಿರಿ ತಾಲೂಕಿನಲ್ಲಿ ಶೇ.23ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲಾದ್ಯಂತ ವಾಡಿಕೆ ಮಳೆ 212 ಮಿ.ಮೀ.ಪೈಕಿ 156 ಮಿ.ಮೀ. ಮಳೆಯಾಗಿದ್ದು, ಶೇ.22ರಷ್ಟು ಮಳೆ ಕೊರತೆಯಾಗಿದೆ.
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 3,08,000 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 2,83,287 ಹೆಕ್ಟೇರ್ ಬಿತ್ತನೆಯಾಗಿದೆ. ಆ.18ರವರೆಗೆ 50,364 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 1,15,315 ಹೆಕ್ಟೇರ್ ಮೆಕ್ಕೆಜೋಳ, 56,148 ಹೆಕ್ಟೇರ್ ಸಜ್ಜೆ, 19,905 ಹೆಕ್ಟೇರ್ ತೊಗರಿ, 8635 ಹೆಕ್ಟೇರ್ ಶೇಂಗಾ, 13,120 ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೊಪ್ಪಳ ತಹಸೀಲ್ದಾರ್‌ವಿಠ್ಠಲ ಚೌಗಲಾ ಹಾಗೂ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳಿದ್ದರು.
ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ. ಶೇ.10 ಗ್ರಾಮಗಳನ್ನು ನಿಯಮಾನುಸಾರ ಗುರುತಿಸಿ. ಅಲ್ಲಿನ ಪ್ರಮುಖ ಐದು ಬೆಳೆಗಳನ್ನು ಪರಿಶೀಲಿಸಿ ದೃಢೀಕರಿಸಬೇಕು.ನಲಿನ್ ಅತುಲ್, ಜಿಲ್ಲಾಧಿಕಾರಿ, ಕೊಪ್ಪಳ