

ಮೈಸೂರು:ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ ನೆರವೇರಿತು. ಮೈಸೂರು ಸೇರಿದಂತೆ ರಾಜ್ಯ, ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿಗಳು ವ್ರತದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಗಣಪತಿ ಹೋಮದ ನಂತರ ಸತ್ಯನಾರಾಯಣ ವ್ರತವನ್ನು ಪ್ರಾರಂಭಿಸಲಾಯಿತು. ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಜ್ಯೋತಿ ಬೆಳಗಿಸಿ ಈ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಸಂತೋಷ್ ಘನಪಾಟಿ ಮತ್ತು ಶಿಷ್ಯರ ನೇತೃತ್ವದಲ್ಲಿ ಸತ್ಯನಾರಾಯಣ ವ್ರತ ನೆರವೇರಿತು.
ಅವಧೂತ ದತ್ತಪೀಠದ ವತಿಯಿಂದಲೇ ವ್ರತಕ್ಕೆ ಬೇಕಾದ ಸಕಲ ಪೂಜಾ ಸಾಮಗ್ರಿಗಳನ್ನೂ ನೀಡಲಾಗಿತ್ತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಈ ಸಂದರ್ಭ ಆಶೀರ್ವಚನ ನೀಡಿ, ಸತ್ಯನಾರಾಯಣ ವ್ರತ ಮಾಡುವುದರಿಂದ ಮನುಷ್ಯರ ದುಃಖ, ಕಷ್ಟ ಕೋಟಲೆ ದೂರವಾಗಲಿದೆ ಎಂದರು. ಸಂಸಾರದಲ್ಲಿ ಸುಖ, ದುಃಖ ಎರಡೂ ಇರಬೇಕು. ಸದಾ ಸತ್ಯವನ್ನೆ ನುಡಿಯಬೇಕು ಸಾಧ್ಯವಾದಷ್ಟೂ ಒಳಿತನ್ನೇ ಮಾಡಬೇಕು ಎಂದು ಹೇಳಿದರು. ಈಗ ಒಳ್ಳೆಯ ಮಳೆ ಸುರಿಯುತ್ತಿದೆ. ಜನರ ಕಷ್ಟಗಳು ದೂರವಾಗಲಿವೆ.
ಕಾವೇರಿ ನದಿ ತುಂಬಿ ಹರಿಯಲಿದೆ ಎಂದು ಸ್ವಾಮೀಜಿ ಆಶಿಸಿದರು.