ಅಧಿಕಾರಿಗಳಿಂದ ಬೆಳೆ ನಷ್ಟ ಮಾಹಿತಿ ಸಂಗ್ರಹ, ವಿಜಯವಾಣಿ ಫಲಶ್ರುತಿಗೆ ಮೆಚ್ಚುಗೆ, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಕೆ

25 ndg 1
Published on

ನಂದಗುಡಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರ ಬೆಳೆದ ಬೆಳೆಗಳಿಗೆ ಬೇಡಿಕೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಏ.25ರಂದು ಹಣ್ಣು, ತರಕಾರಿ ಬೆಳೆಗಾರರಿಗೆ ಸಂಕಷ್ಟ ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ.

ಹೋಬಳಿಯಲ್ಲಿ ಬೆಳೆದ ಟೊಮ್ಯಾಟೋ, ಹೂವುಕೋಸು, ಚಿಕ್ಕಡಿಕಾಯಿ, ಸೌತೆಕಾಯಿ. ದ್ರಾಕ್ಷಿ, ಕ್ಯಾರೆಟ್, ಬೀಟ್‌ರೋಟ್, ಆಲುಗಡ್ಡೆ ಬೆಳೆಯನ್ನು ಹೆಚ್ಚಿನ ರೈತರು ಬೆಳೆದಿದ್ದಾರೆ. ಆದರೆ ಬೇಡಿಕೆ ಇಲ್ಲದ ಪರಿಣಾಮ ಜಮೀನುಗಳಲ್ಲೇ ಬೆಳೆ ಕೊಳೆಯುವಂತಾಗಿದೆ. ಈ ಬಗ್ಗೆ ವಿಜಯವಾಣಿಯಲ್ಲಿ ಹಲವು ದಿನಗಳಿಂದ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಶನಿವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ನಂದಗುಡಿ ಹೋಬಳಿಯ ದಿನ್ನಹಳ್ಳಿ ಗ್ರಾಮದ ನಾರಾಯಣಪ್ಪ ತೋಟ, ನಂದಗುಡಿಯ ಚಿಂತಪ್ಪ ಬನ್ನಹಳ್ಳಿಯ ಕೃಷ್ಣಮೂರ್ತಿ, ಇಟ್ಟಸಂದ್ರ ಗ್ರಾಮದ ಪಿಳ್ಳೇಗೌಡ ಅವರ ತೋಟಗಳಿಗೆ ಭೇಟಿ ನೀಡಿ ಹಣ್ಣು ತರಕಾರಿಗಳ ಮಾಹಿತಿ ಪಡೆದುಕೊಂಡಿತು.

ರೈತರು ಬೆಳೆದ ಹಣ್ಣು, ತರಕಾರಿಗಳ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ನಷ್ಟವಾದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರ ಮುಂದಿನ ಕ್ರಮದ ಬಳಿಕ ಪರಿಹಾರ ೋಷಣೆ ಮಾಡಿದರೆ ನಷ್ಟವಾದ ರೈತರಿಗೆ ಪರಿಹಾರ ತಲುಪುಸಲಾಗುವುದು. ಪ್ರಶಾಂತ್ ತೋಟಗಾರಿಕೆ ಸಹಾಯಕ ನಿರ್ದೇಶಕ, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net