ಹೂವಿನಶಿಗ್ಲಿಮಠದ ಜಾತ್ರೆಗೆ ರೊಟ್ಟಿ ಸಂಗ್ರಹ

19 LXR 3
Published on

ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಜ.13ರಿಂದ 15ನವರೆಗೆ ಜರುಗಲಿರುವ ಖಡಕ್ ರೊಟ್ಟಿ- ಕರಿಂಡಿ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಎತ್ತಿನ ಬಂಡಿಗಳಲ್ಲಿ ಸಂಚರಿಸಿ ರೊಟ್ಟಿ, ಕಡಬು ಇತರ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು.

ಕಳೆದ 45 ವರ್ಷಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಜಾತ್ರೆಯ ಮುನ್ನಾದಿನ ಗ್ರಾಮದಲ್ಲಿನ ಎಲ್ಲ ಜಾತಿ, ಜನಾಂಗದವರು ರೊಟ್ಟಿ, ದವಸ, ಧನ, ಧಾನ್ಯದ ಸೇವೆಯನ್ನು ಮಠಕ್ಕೆ ಬಂದು ಸಲ್ಲಿಸುತ್ತಾರೆ. ಈ ವರ್ಷ ಶ್ರೀಗಳೇ ಎತ್ತಿನ ಬಂಡಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸ ಸಂಗ್ರಹಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಶ್ರೀಗಳೇ ಭಕ್ತರ ಮನೆ ಬಾಗಿಲಿನತ್ತ ಬರುತ್ತಾರೆಂಬ ಸಂಭ್ರಮದಿಂದ ಗ್ರಾಮ ಪಂಚಾಯಿತಿಯವರು ಊರೆಲ್ಲ ಸ್ವಚ್ಛತೆ ಮಾಡಿದ್ದರು. ಮನೆಯ ಮುಂದೆ ರಂಗೋಲಿ ಹಾಕಿದ್ದರು. ಮೊದಲೇ ಸಿದ್ಧಪಡಿಸಿದ್ದ ನೂರಾರು ರೊಟ್ಟಿಗಳ ಬುಟ್ಟಿಗೆ ಹೊಸ ಬಟ್ಟೆ ಕಟ್ಟಿ ಪೂಜೆ ಮಾಡಿ ತಲೆ ಮೇಲೆ ಹೊತ್ತು ಕಾಯುತ್ತಿದ್ದರು. ರೊಟ್ಟಿಬುಟ್ಟಿಯನ್ನು ಶ್ರೀಗಳು ಸ್ಪರ್ಶಿಸಿ ಆಶೀರ್ವದಿಸಿದ ಬಳಿಕ ಎತ್ತಿನ ಚಕ್ಕಡಿಯಲ್ಲಿ ರೊಟ್ಟಿ ಸಂಗ್ರಹಿಸಲಾಯಿತು. ಬಳಿಕ ರಥೋತ್ಸವದ ಕಳಸಾರೋಹಣ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net