ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಕಲಾವಿದರ ದಾಖಲೆ ಸಂಗ್ರಹ: ಅಕಾಡೆಮಿ ಅಧ್ಯಕ್ಷೆ ಡಾ. ಸಂಧ್ಯಾ ಪುರೆಚ್

18
Published on

ಮೈಸೂರು: ದೇಶದ ಕಲಾವಿದರನ್ನು ಗುರುತಿಸಲು ಅನುಕೂಲವಾಗುವಂತೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷೆ ಡಾ. ಸಂಧ್ಯಾ ಪುರೆಚ್ ತಿಳಿಸಿದರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಲಾ ಸಂವಾದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ನೂತನ ಅಂತರ್ಜಾಲಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರ ಮಟ್ಟದಲ್ಲಿ ಕಲಾವಿದರನ್ನು ಗುರುತಿಸಲು ಮತ್ತು ಸಂಸ್ಕೃತಿಯ ಉಳಿವಿಗಾಗಿ, ಕಲೆಗಳ ಪ್ರಚಾರಕ್ಕಾಗಿ ಕಾರ್ಯಕ್ರಮ ರೂಪಿಸಲು ಅಧಿಕೃತವಾದ ಮಾಹಿತಿ ಸಂಗ್ರಹಿಸಲು ಅಕಾಡೆಮಿ ಉದ್ದೇಶಿಸಿದೆ ಎಂದು ಹೇಳಿದರು.

ಇದಕ್ಕಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಕಲಾವಿದರಿಗೆ ಆನ್‌ಲೈನ್ ಮೂಲಕ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮ ರೂಪಿಸುತ್ತಿದ್ದು, ವಯಸ್ಸಿನ ಭೇದವಿಲ್ಲದೆ ಎಲ್ಲ ವಯಸ್ಸಿನ ಕಲಾವಿದರು ಅಕಾಡೆಮಿಯ ಅಧಿಕೃತ ಜಾಲತಾಣದಲ್ಲಿ ತಮ್ಮ ಸ್ವವಿವರವನ್ನು ಭರ್ತಿ ಮಾಡಲು ಕೋರಿದರು.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ತನ್ನ ಅಂಗ ಸಂಸ್ಥೆಗಳ ಮೂಲಕ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಬಗ್ಗೆ ಕಲಾವಿದರು, ವಿದ್ಯಾರ್ಥಿಗಳು ತಿಳಿದುಕೊಳ್ಳುವಂತೆ ಸಲಹೆ ನೀಡಿದರು.

ಪ್ರದರ್ಶನ ಕಲೆಗಳಲ್ಲಿ ಸಂಶೋಧನೆ ಕೈಗೊಳ್ಳುವ ಯುವ ಸಂಶೋಧಕರಿಗೆ ಜೂನಿಯರ್ ಫೆಲೋಶಿಪ್ ಮತ್ತು ಹಿರಿಯ ಸಂಶೋಧಕರಿಗೆ ಸೀನಿಯರ್ ಫೆಲೋಶಿಪ್ ನೀಡಲಾಗುತ್ತದೆ. ಅಲ್ಲದೆ ಸಿಸಿಆರ್‌ಟಿ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್‌ಸಿಎ) ದ ಮೂಲಕವೂ ಸಹ ಹಲವಾರು ಫೆಲೋಶಿಪ್‌ಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.

ಅಲ್ಲದೆ ಡಿಡಿಡಿ. ಐ್ಞಜಿಚ್ಚ್ಠ್ಝಠ್ಠ್ಟಿಛಿ.್ಞಜ್ಚಿ.ಜ್ಞಿ ನಲ್ಲಿ ಅಂತರ್ಜಾಲಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಲಭ್ಯವಿರುವ ವಿವಿಧ ಕಲಾಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ. ನಾಗೇಶ್ ಬೆಟ್ಟಕೋಟೆ ಮಾತನಾಡಿ, ವಿಶ್ವದಲ್ಲಿಯೇ ಭಾರತೀಯ ಕಲಾ ಸಂಸ್ಕೃತಿ ಮತ್ತು ಪರಂಪರೆಗಳು ವಿಶಿಷ್ಟ ಗುಣವನ್ನು ಹೊಂದಿದ್ದು, ಮನರಂಜನೆ ಜತೆಗೆ ಸಮಾಜಕ್ಕೆ ನೈತಿಕ ಶಿಕ್ಷಣವನ್ನು ನೀಡುವ ಬಹುದೊಡ್ಡ ಜವಾಬ್ದಾರಿ ನಿಭಾಯಿಸುತ್ತವೆ ಎಂದು ವಿಶ್ಲೇಷಿಸಿದರು.

ನೂರಾರು ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಬೇಕಾದ ಬಹುದೊಡ್ಡ ಜವಾಬ್ದಾರಿ ಯುವ ಕಲಾವಿದರ ಮೇಲಿದೆ. ವಿಶ್ವವಿದ್ಯಾಲಯವು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಿರುವ ಎಲ್ಲ ಮೂಲಗಳಿಂದಲೂ ಕಲಾವಿದರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ವಿಶ್ವವಿದ್ಯಾಲಯದಲ್ಲಿ ಶಿಬಿರಗಳನ್ನು ಆಯೋಜಿಸಲು ಉತ್ಸುಕವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಡಾ.ಪುರೇಖ ಅವರು ವಿದ್ಯಾರ್ಥಿಗಳು, ವಿದೇಶಿ ಅತಿಥಿಗಳು ಮತ್ತು ಅಧ್ಯಾಪಕರೊಂದಿಗೆ ನಡೆದ ಸಂವಾದದಲ್ಲಿ ವಿಶ್ಲೇಷಣಾತ್ಮಕ ಉತ್ತರಗಳನ್ನು ನೀಡಿ, ಬಹುಮಟ್ಟಿಗೆ ಶ್ರೋತ್ರುಗಳು ತಿಳಿದಿರದ ಮಾಹಿತಿಗಳನ್ನು ಹಂಚಿಕೊಂಡರು. ವಿಧುಷಿ ಕೃಪಾ ಫಡ್ಕೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net