

ಶಿವಮೊಗ್ಗ: ಬಿಹಾರ ವಿಧಾನಸಭೆ ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದಲ್ಲಿನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದೆ. ಅದಕ್ಕಾಗಿ ಸಚಿವರು ಅಧಿಕಾರಿಗಳ ಮೂಲಕ ಹಣ ವಸೂಲಿಗಿಳಿದಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಗಂಭೀರ ಆರೋಪ ಮಾಡಿದರು.
ಸಚಿವರ ವಸೂಲಾತಿ ಬಗ್ಗೆ ಅಧಿಕಾರಿಗಳು ವಿಪಕ್ಷದವರ ಎದುರು ಕಣ್ಣೀರು ಹಾಕುತ್ತಿದ್ದಾರೆ. ವರ್ಗಾವಣೆ ದಂಧೆ ಮುಗಿದಿದೆ. ಈಗ ಅದೇ ಸ್ಥಾನದಲ್ಲಿ ಮುಂದುವರಿಸಲು ಮಂತ್ರಿಗಳು ವಸೂಲಿಗಿಳಿದಿದ್ದಾರೆ. ಇದೊಂದು ದಂಧೆಯಾಗಿದೆ. ಆದರೆ ಸಂಗ್ರಹಿಸಿದ ಹಣ ಬಿಹಾರದ ತಲುಪುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಮನೆ, ಕಚೇರಿಯಲ್ಲಿ ಮತದಾರರ ಗುರುತಿನ ಪತ್ರ ಸಿಕ್ಕಿದೆ ಎಂದು ಸುದ್ದಿಯಾಗಿದೆ. ದೀಪಾವಳಿ ಪ್ರಯುಕ್ತ ಸ್ವಚ್ಛತೆ ಮಾಡುತ್ತಿದ್ದ ವೇಳೆ ಕಸವನ್ನು ಸುಟ್ಟಿ ಹಾಕಿದ್ದೇನೆ. ಅದಕ್ಕೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಗುತ್ತೇದಾರ್ ಹೇಳಿದ್ದಾರೆ. ರಾಹುಲ್ ಗಾಂಧಿ ಮತ ಕಳ್ಳತನ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬಿಹಾರ ಚುನಾವಣೆಯ ಪ್ರಚಾರ ಕಣಕ್ಕೆ ರಾಹುಲ್ ಮಾತಿಗೊಂದು ಸಾಕ್ಷೃ ನೀಡುವ ಸಲುವಾಗಿ ಗುತ್ತೇದಾರ್ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಟಾಂಗ್ ನೀಡಿದರು.
ಪ್ರತಿ ತಿಂಗಳು ವೇತನ ನೀಡಿಲ್ಲ ಎಂಬ ಕಾರಣಕ್ಕೆ ನೀರುಗಂಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಮೀಕ್ಷೆಗೆ ಹೋಗಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಟಿ ನಿಗಮದ ಅಧಿಕಾರಿಯೊಬ್ಬರು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರ್ಕಾರದಲ್ಲಿ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆ ಸಿಬ್ಬಂದಿ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಲಾಲ್ಬಾಗ್‌ನಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಮಹಿಳೆಯೊಬ್ಬರು ನನಗೆ ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರಲು ಜನರಿಗೆ ಆಮಿಷ ತೋರಿಸಿ ಚುನಾವಣೆ ಗೆದ್ದರು. ಈಗ ಭರವಸೆ ಈಡೇರಿಸಲು ಆಗುತ್ತಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಆಗುತ್ತಿಲ್ಲ. ಖಾಸಗಿ ಕಂಪನಿಗಳ ಮಾಲೀಕರು ನಾವೇ ಗುಂಡಿ ಮುಚ್ಚಿಸುತ್ತೇವೆ ಎಂದು ಸರ್ಕಾರಕ್ಕೆ ಮಂಗಳಾರತಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.