

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗ್ರಾಪಂ ವ್ಯಾಪ್ತಿಯ ಮೇಲ್‌ಗಂಗೊಳ್ಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ಸಂಪೂರ್ಣವಾಗಿ ಶಿಥಿಲವಾಗಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ಗೋಡೆ ಶಿಥಿಲಗೊಂಡು ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕಿಟಕಿಗಳು ಮುರಿದು ಬಿದ್ದಿದ್ದು, ಮೇಲ್ಛಾವಣಿ ಕೂಡ ದುಸ್ಥಿತಿಯಲ್ಲಿದೆ. ಸಭಾಭವನದ ಒಳಗಿನ ವಿದ್ಯುತ್ ಬೋರ್ಡ್‌ಗಳು ನೇತಾಡುತ್ತಿದ್ದು, ಮುಟ್ಟಿದರೆ ವಿದ್ಯುತ್ ಶಾಕ್ ತಗುಲುವ ಸಾಧ್ಯತೆ ಇದೆ. ಸಭಾಭವನ ಸೋರುತ್ತಿರುವುದರಿಂದ ಮಳೆಗಾಲದಲ್ಲಿ ಒಳಗೆ ನೀರು ನಿಲ್ಲುತ್ತಿದೆ. ಇದರಿಂದ ಸಭಾಭವನದಲ್ಲಿ ಕಾರ್ಯಕ್ರಮ ನಡೆಸುವುದು ಕಷ್ಟ ಅನ್ನಿಸುತ್ತಿದೆ.
ಸಭಾಭವನದ ದುರಸ್ತಿಗೆ ಗಂಗೊಳ್ಳಿ ಗ್ರಾಪಂ ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿದ್ದರೂ, ದುಸ್ಥಿತಿ ಹಾಗೆ ಮುಂದುವರಿದಿದೆ. ಕೆಲವು ವರ್ಷಗಳ ಹಿಂದೆ ನೆಲಕ್ಕೆ ಟೈಲ್ಸ್ ಹಾಸು ಹಾಕಲಾಗಿದ್ದು, ವಿದ್ಯುತ್ ಸಂಪರ್ಕ ವ್ಯವಸ್ಥೆ, ಮೇಲ್ಛಾವಣಿ ದುರಸ್ತಿಗೊಳಿಸಲಾಗಿತ್ತು. ಪ್ರತಿ ವರ್ಷವೆಂಬಂತೆ ಲಕ್ಷಾಂತರ ರೂ. ಅನುದಾನ ಸಭಾಭವನದ ದುರಸ್ತಿಗೆ ಬಳಸುತ್ತಿರುವ ಗ್ರಾಪಂ ಸರ್ಕಾರದ ಬೇರೆ ಬೇರೆ ಅನುದಾನ ಬಳಸಿಕೊಂಡು ಹೊಸ ಸಭಾಭವನ ನಿರ್ಮಿಸಲಿ ಎಂಬುವುದು ಸ್ಥಳೀಯರ ಆಗ್ರಹ.
ಹೊಸ ಸಭಾಭವನ ನಿರ್ಮಿಸುವಂತೆ ಸ್ಥಳೀಯರು, ಸಂಘ, ಸಂಸ್ಥೆ ಮನವಿ ಮಾಡಿದ್ದು, ಗ್ರಾಪಂ ಸ್ವಲ್ಪ ಅನುದಾನ ಮೀಸಲಿಟ್ಟಿತ್ತು. ಈಗಿರುವ ಸಭಾಭವನದ ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿದ್ದಾಗಿದ್ದು, ಹೊಸ ಸಭಾಭವನ ನಿರ್ಮಿಸುವುದು ಅಸಾಧ್ಯವೆನಿಸಿದೆ. ಇದಕ್ಕಾಗಿ ಸ್ಥಳೀಯಾಡಳಿತ ನೀಲಿನಕಾಶೆ ತಯಾರಿಸಿ ಅನುದಾನ ಮೀಸಲಿಡಬೇಕಿದೆ. ಆದಷ್ಟು ಶೀಘ್ರ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದ ದುರಸ್ತಿ ನಡೆಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಮೇಲ್‌ಗಂಗೊಳ್ಳಿಯಲ್ಲಿರುವ ಡಾ.ಅಂಬೇಡ್ಕರ್ ಸಭಾಭವನದ ದುರಸ್ತಿಗೆ ಬಗ್ಗೆ ಅನೇಕ ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದು, ಸಭಾಭವನದ ಸಂಪೂರ್ಣ ದುರಸ್ತಿ ಈವರೆಗೆ ಆಗಿಲ್ಲ. ಕಟ್ಟಡ ಸಂಪೂರ್ಣ ಶಿಥಿಲವಾಗುತ್ತಿದ್ದು, ಕಿಟಕಿಗಳು ಕಳಚಿ ಬೀಳುತ್ತಿದೆ. ವಿದ್ಯುತ್ ಸಂಪರ್ಕದ ಪೈಪ್ ನೇತಾಡುತ್ತಿದ್ದು, ಅವಘಡ ಸಂಭವಿಸುವ ಸಾಧ್ಯತೆಗಳಿವೆ.-ಭಾಸ್ಕರ ಎಚ್.ಜಿ., ಡಾ.ಅಂಬೇಡ್ಕರ್ ಯುವಕ ಮಂಡಲ ಸ್ಥಾಪಕ ಅಧ್ಯಕ್ಷ
ಡಾ.ಅಂಬೇಡ್ಕರ್ ಸಭಾಭವನದ ದುರಸ್ತಿಗೆ ಗ್ರಾಪಂನಿಂದ ಅನುದಾನ ಮೀಸಲಿಡಲಾಗಿದೆ. ಹಂತ ಹಂತವಾಗಿ ಸಭಾಭವನದ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈಗಿರುವ ಅಂಬೇಡ್ಕರ್ ಸಭಾಭವನದ ಜಾಗ ಸಮೀಪದ ಸರ್ಕಾರಿ ಶಾಲೆಗೆ ಸೇರಿದ್ದಾಗಿದ್ದು, ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ.-ಉಮಾಶಂಕರ, ಗಂಗೊಳ್ಳಿ ಪಿಡಿಒ