ಕುಸಿದು ಬಿದ್ದ ಅಂಬೇಡ್ಕರ್ ಭವನ ಆವರಣದಲ್ಲಿನ ತಡೆಗೋಡೆ

ಅಂಬೇಡ್ಕರ್ ಭವನ ಆವರಣದಲ್ಲಿರುವ ತಡೆಗೋಡೆ ಕುಸಿದು ಬಿದ್ದಿರುವುದು.
ಅಂಬೇಡ್ಕರ್ ಭವನ ಆವರಣದಲ್ಲಿರುವ ತಡೆಗೋಡೆ ಕುಸಿದು ಬಿದ್ದಿರುವುದು.
Published on

ವಿರಾಜಪೇಟೆ: ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿನ ಒಳಭಾಗದಲ್ಲಿ ನಿರ್ಮಿಸಲಾದ ತಡೆಗೋಡೆ ಸೋಮವಾರ ಸಂಜೆ ಕುಸಿದು ಬಿದ್ದಿದೆ.

ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಿ ನಾಲ್ಕೈದು ವರ್ಷ ಕಳೆದರೂ ಪೂರ್ಣಗೊಂಡಿರಲಿಲ್ಲ.

ನಿರ್ಮಿತಿ ಕೇಂದ್ರ ಗುತ್ತಿಗೆಯನ್ನು ಪಡೆದ ಬಳಿಕ ಶಾಸಕರ ಪ್ರಯತ್ನದಿಂದ ಏ. 14ರಂದು ಈ ಭವನ ಲೋಕಾರ್ಪಣೆಗೊಂಡಿತ್ತು. ಭವನದೊಳಗೆ ಪ್ರವೇಶಿಸುವ ಸ್ಥಳದಲ್ಲಿ ಮೇಲ್ಬಾಗದ ಬರೆಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಉದ್ಘಾಟನೆಗೊಂಡ ಒಂದೇ ತಿಂಗಳಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆ ವೈರಲ್ ಆಗುತ್ತಿದ್ದಂತೆ, ರಾತೋ ರಾತ್ರಿ ಮಣ್ಣನೆಲ್ಲ ತೆರವುಗೊಳಿಸಿ ಏನು ನಡೆದಿಲ್ಲ ಎಂಬಂತೆ ಸ್ವಚ್ಛಗೊಳಿಸಿ ಟಾರ್ಪಲ್ ಮೂಲಕ ಮುಚ್ಚಲಾಗಿದೆ.

ತಡೆಗೋಡೆಯ ಒಳಭಾಗದಲ್ಲಿ ಸಮರ್ಪಕವಾಗಿ ಮಣ್ಣನ್ನು ತುಂಬಿಸದ ಕಾರಣ ಮಳೆ ನೀರು ಹರಿದು ಬಂದು ಶೇಖರಣೆಯಾಗಿ ಒತ್ತಡ ಹೆಚ್ಚಾಗಿ ತಡೆಗೋಡೆ ನೆಲಕಚ್ಚಿ ಉಳಿದ ಭಾಗ ಬಿರುಕು ಬಿಟ್ಟಿದೆ. ಇದು ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕ ಮಾದಯ್ಯ, ತಡಗೋಡೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಶಾಸಕರು ಅಂಬೇಡ್ಕರ್ ಮೂರ್ತಿಯನ್ನು ಲೋಕಾರ್ಪಣೆಗೊಳಿಸುವ ಸಂದರ್ಭದಲ್ಲಿ ಅಪೂರ್ಣ ಕಾಮಗಾರಿ ಸುಂದರವಾಗಿ ಕಾಣುವುದಿಲ್ಲ ಎಂಬ ಕಾರಣಕ್ಕಾಗಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಗುತ್ತಿಗೆದಾರ ಕಟ್ಟಡವನ್ನು ಮಾತ್ರ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರ ಮಾಡಿದ್ದು, ತಡೆಗೋಡೆ ಕಾಮಗಾರಿ ಇನ್ನೂ ಗುತ್ತಿಗೆದಾರರ ಅಧೀನದಲ್ಲಿದೆ. ತಡೆಗೋಡೆ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಇತ್ತೀಚೆಗಷ್ಟೆ ಕಾಮಗಾರಿ ವೆಚ್ಚ ಕುರಿತು ತೀರ್ಮಾನಿಸಲಾಗಿದ್ದು, ಗುತ್ತಿಗೆದಾರರಿಗೆ ಯಾವುದೇ ರೀತಿಯ ಹಣವನ್ನು ಬಿಡುಗಡೆಗೊಳಿಸಿಲ್ಲ. ತಡೆಗೋಡೆ ನಿರ್ಮಾಣವಾದ ನಂತರ ಪಿಡಬ್ಲ್ಯೂಡಿ ಇಂಜಿನಿಯರ್‌ಗಳ ಮೂಲಕ ತಡೆಗೋಡೆಯ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net